ಬೆಂಗಳೂರು:- ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಹಮ್ಮಿಕೊಂಡಿರುವ ಸಿರಿಧಾನ್ಯ ಮತ್ತು ಸಾವಯವ ಅಂತರಾಷ್ಟ್ರೀಯ ವಾಣಿಜ್ಯ ಮೇಳವು ಅರ್ಥಗರ್ಭಿತವಾಗಿ ಯಶ್ವಸಿಯಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು..
ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿರಿಧಾನ್ಯ ಮೇಳ ಉದ್ಘಾಟನೆ ಮಾಡಿದ ನಂತರ ನಿನ್ನೆ ಮೊದಲ ದಿನವೇ 60 ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿದ್ದಾರೆ ಎಂದರು..
61 ಸಭೆಗಳಲ್ಲಿ 23.14 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯದ ಪೈಕಿ 1361 ಮೆಟ್ರಿಕ್ ಟನ್ ಪ್ರಮಾಣದ 5.10 ಕೋಟಿ ಮೌಲ್ಯದ 6 ಒಪ್ಪಂದಗಳಾಗಿವೆ..
ಆಸ್ಟ್ರೇಲಿಯಾ, ಯುರೋಪ್, ಕೀನ್ಯಾ, ಕುವೈತ್, ಯುಎಇ, ದೇಶಗಳ ಮಾರುಕಟ್ಟೆದಾರರು ಮೇಳದಲ್ಲಿ ಭಾಗವಹಿಸಿದ್ದಾರೆ..
7 ಅಂತರಾಷ್ಟ್ರೀಯ, 40 ಹೊರರಾಜ್ಯಗಳ ಹಾಗು 50 ರಾಜ್ಯದ ಮಾರುಕಟ್ಟೆದಾರರು ಸಭೆಗಳಲ್ಲಿ ಭಾಗವಹಿಸಿದ್ದಾರೆ. 97 ಮಾರುಕಟ್ಟೆದಾರರು, 154 ಉತ್ಪಾದಕರು ಬಿ2ಬಿ ಸಭೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು..
310 ಮಳಿಗೆಗಳು ಮೇಳದಲ್ಲಿದ್ದು, 190 ಮಳಿಗೆಗಳು ಸಾವಯವ ಮತ್ತು ಸಿರಿಧಾನ್ಯ ಸಂಸ್ಥೆಗಳು ರಫ್ತುದಾರರು, ಮಾರಾಟಗಾರರು, ರೈತ ಗುಂಪುಗಳು, ಪ್ರಾಂತೀಯ ಒಕ್ಕೂಟಗಳು, ಸಾವಯವ ಪರಿಕರ ಸಂಸ್ಥೆಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಹಾಗೂ ಸಂಸ್ಥೆಗಳು ಪಾಲ್ಗೋಂಡಿವೆ ಎಂದರು..
ಈ ಮೇಳ ನನಗೆ ಅಸಾಧಾರಣ ಅನುಭವ ನೀಡಿದ್ದು, ಕೃಷಿ ಮಂತ್ರಿಯಾಗಿರುವುದಕ್ಕೆ ಖುಷಿಯಾಗಿದೆ ಎಂದರು..
ರಾಜ್ಯದ ಎಲ್ಲಾ ಜಿಲ್ಲೆಗಳ ರೈತರು ಹೆಚ್ಚು ಹೆಚ್ಚು ಸಿರಿಧಾನ್ಯಗಳನ್ನು ಬೆಳೆಯಬೇಕು. ಕಡಿಮೆ ಖರ್ಚು, ಕಡಿಮೆ ಸಮಯದಲ್ಲಿ ಬೆಳೆದು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು. ಪ್ರಸ್ತುತ ಹೆಕ್ಟೇರ್ ಗೆ 10 ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು..
ಸಿರಿಧಾನ್ಯದಿಂದ ತಯಾರಿಸಿದ ಆಹಾರ ಉತ್ಪನ್ನಗಳು ಹೆಚ್ಚು ರುಚಿಕರವಾಗಿವೆ. ನವಣೆ ಮಸಾಲೆ ಬ್ರೆಡ್, ರಾಗಿ ಬ್ರೆಡ್, ಫಿಜ್ಜಾ, ಬರ್ಗರ್, ನೂಡಲ್ಸ್ , ಬಿಸ್ಕತ್, ಚಕ್ಕುಲಿ, ಚಿಕ್ಕಿ ಇದೇ ಅಲ್ಲದೇ ವಿಶೇಷವಾಗಿ ಯುವ ಪೀಳಿಗೆ ಇಷ್ಟ ಪಡುವ ಆಧುನಿಕ ಸಿರಿಧಾನ್ಯ ಬ್ರೌನಿ, ಬಫ್ತಿನ್ಸ್, ರಾಗಿ ಚಾಕಲೇಟ್, ಜಾಮುನು ಆಕರ್ಷಕವಾಗಿದೆ ಎಂದರು..
ಈ ವರ್ಷ 16 ರಾಜ್ಯಗಳು ಸಿರಿಧಾನ್ಯ ಮೇಳದಲ್ಲಿ ಭಾಗವಹಿಸಿದ್ದು, ಹೆಚ್ಚು ಅರ್ಥಪೂರ್ಣವಾಗಿದೆ.. 50 ಪರಿಣಿತರು ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು..
ಸಿರಿಧಾನ್ಯ ಬೆಳೆಯುವ ರೈತರಿಗೆ ಉತ್ತೇಜನ ನೀಡಲು ರೈತ ಸಿರಿ ಯೋಜನೆಯಡಿ ಹೆಕ್ಟೇರ್ ಗೆ 10 ಸಾವಿರದಂತೆ ಒಂದು ಲಕ್ಷ ರೈತರಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದರು.
ಕೃಷಿ ಆಯುಕ್ತ ವೈ.ಎಸ್.ಪಾಟೀಲ್, ನಿರ್ದೇಶಕ ಡಾ. ಜಿ.ಟಿ.ಪುತ್ರ, ಹಾಗೂ ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಶ್ರೀನಿವಾಸ್ ಉಪಸ್ಥಿತರಿದ್ದರು…