ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ಕಳೆದ 11 ವರ್ಷಗಳಿಂದ ಸುದೀಪ್ ಬಿಗ್ ಬಾಸ್ ನಿರೂಪಣೆ ಮಾಡುತ್ತಿದ್ದಾರೆ. ಅದರಲ್ಲೂ ವೀಕೆಂಡ್ ನಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಭರ್ಜರಿ ಟಿಆರ್ ಪಿ ಬರುತ್ತಿದೆ. ತಾಯಿಯ ನಿಧನದ ಹಿನ್ನೆಲೆಯಲ್ಲಿ ಸುದೀಪ್ ಎರಡು ವಾರಗಳ ಕಾಲ ಕಾರ್ಯಕ್ರಮ ನಿರೂಪಣೆ ಮಾಡಿರಲಿಲ್ಲ. ಆ ವಾರ ಟಿಆರ್ಪಿ ಕುಸಿದಿತ್ತು. ಈಗ ಬಿಗ್ ಬಾಸ್ ಪೂರ್ಣಗೊಳ್ಳುತ್ತಿರುವಾಗ ಇದರ ಟಿಆರ್ಪಿಯಲ್ಲಿ ಭರ್ಜರಿ ಏರಿಕೆ ಕಂಡಿದ್ದು ಈ ಬಗ್ಗೆ ಸುದೀಪ್.
‘ಕಳೆದ ವರ್ಷ ಫಿನಾಲೆಯಲ್ಲಿ 12 ಟಿವಿಆರ್ ಸಿಕ್ಕಿತ್ತು. ಅದು ಅತಿ ಹೆಚ್ಚು ಎಂದು ಅನಿಸಿಕೊಂಡಿತ್ತು. 7 ಸರಾಸರಿ ಟಿವಿಆರ್ ಸಿಕ್ಕರೆ ಅದು ಒಳ್ಳೆಯ ಟಿಆರ್ಪಿ ಎಂದರ್ಥ. ಸಿಸನ್ ಮಧ್ಯದಲ್ಲೇ ನಮಗೆ 12 ಟಿವಿಆರ್ ಸಿಕ್ಕಿದೆ’ ಎಂದು ಸುದೀಪ್ ಮೆಚ್ಚುಗೆ ಹೊರಹಾಕಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಟಿಆರ್ಪಿ ಹೆಚ್ಚಬಹುದು ಎಂಬ ಸೂಚನೆಯನ್ನು ನೀಡಿದರು.
ಆ ಬಳಿಕ ಯಾವ ಸ್ಪರ್ಧಿಗಳಿಗೆ ಎಷ್ಟು ಟಿಆರ್ಪಿ ನೀಡುತ್ತೀರಿ ಎಂಬ ಟಾಸ್ಕ್ ನೀಡಲಾಯಿತು. ಪ್ರತಿ ಸ್ಪರ್ಧಿ ಬಂದು 1ರಿಂದ 12ವರೆಗೆ ನೀಡಿದ ಸ್ಥಾನಗಳಲ್ಲಿ ಎದುರಾಳಿಗಳನ್ನು ಕೂರಿಸಬೇಕು. ಈ ವೇಳೆ ಸ್ಪರ್ಧಿಗಳು ಕಿತ್ತಾಡಿಕೊಂಡರು. ಆಗ ಸುದೀಪ್ ‘ಒಬ್ಬರೂ ನಾನು ಮನೆಯಲ್ಲಿ ಏನೂ ಮಾಡುತ್ತಿಲ್ಲ, ಹೀಗಾಗಿ ನನ್ನನ್ನು ನಾನು ಕೆಳಕ್ಕೆ ಇಟ್ಟುಕೊಳ್ಳುತ್ತೇನೆ ಎಂದು ಹೇಳಿಲ್ಲ. 12 ಟಿವಿಆರ್ ಬರೋಕೆ ನೀವಲ್ಲ, ನಾನು ಕಾರಣ’ ಎಂದರು.
ಈ ವೇಳೆ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಇದು ಹೌದು ಎನಿಸಿದೆ. ಹೀಗಾಗಿ, ಅವರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ‘ಹೊರಗೆ ಏನು ನಡೆಯುತ್ತಿದೆ ಎಂಬುದು ನಿಮಗೆ ಗೊತ್ತಿರಲ್ಲ. ಹೊರಗೆ ಬೇರೆಯದೇ ಇರುತ್ತದೆ’ ಎಂದರು.