ಮಂಡ್ಯ :- ಮುಂಬರುವ 2028 ರ ವಿಧಾನ ಸಭಾ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಜೆಡಿಎಸ್ ಪಕ್ಷದ ನಾನೇ ಅಭ್ಯರ್ಥಿಯಾಗಿ ನಾನೇ ಸ್ಪರ್ಧೆ ಮಾಡುತ್ತೇನೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಶನಿವಾರ ಹೇಳಿದರು.
ಕರ್ನಾಟಕದಲ್ಲಿ ಹೆಚ್ಚು ಭ್ರಷ್ಟಾಚಾರ ಮಾಡಿದ ಸಿಎಂಗಳಲ್ಲಿ ಸಿದ್ದರಾಮಯ್ಯ ಫಸ್ಟು: ಜನಾರ್ದನ ರೆಡ್ಡಿ!
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕೆಲವರು ಈಗಾಗಲೇ ಮದ್ದೂರು ಕ್ಷೇತ್ರದಲ್ಲಿ ಹಲವಾರು ಕಡೆ ಡಿ.ಸಿ.ತಮ್ಮಣ್ಣರಿಗೆ ವಯಸ್ಸಾಗಿದೆ ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನಾನೇ ಎನ್ ಡಿಎ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿರುವುದು ನನಗೆ ಬೇಸರ ತಂದಿದೆ ಎಂದು ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ರವರ ವಿರುದ್ಧ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ 94 ವರ್ಷ ವಯಸ್ಸಾಗಿದ್ದರೂ ಮುಂದೆ ನಡೆಯುವ ಚುನಾವಣೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ. ಹೀಗಿರುವಾಗ ನಾನು ಏಕೆ ಮತ್ತೆ ಸ್ಪರ್ಧಿಸಬಾರದು. ಇಷ್ಟಕ್ಕೂ ಮೀರಿ ನನ್ನ ಕುಟುಂಬದಲ್ಲೇ ಸ್ಪರ್ಧಿಸಲು ಇಬ್ಬರು ವ್ಯಕ್ತಿಗಳಿದ್ದಾರೆ ಎಂದರು.
ಇನ್ನು ಫೆಬ್ರವರಿ 2 ರಂದು ನಡೆಯುವ ಮನ್ ಮುಲ್ ನಿರ್ದೆಶಕರ ಚುನಾವಣೆಗೆ ಮೈತ್ರಿ ಕೂಟದ ಅಭ್ಯರ್ಥಿಗಳಾಗಿ ಜೆಡಿಎಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಎಸ್.ಮಹೇಶ್ ಹಾಗೂ ಬಿಜೆಪಿಯಿಂದ ರೂಪ ಅವರನ್ನು ಪಕ್ಷದ ವರಿಷ್ಠರು ಅಂತಿಮಗೊಳಿಸಿದ್ದಾರೆಂದು ಡಿ.ಸಿ.ತಮ್ಮಣ್ಣ ಸ್ಪಷ್ಟಪಡಿಸಿದರು.
ಎನ್.ಡಿ.ಎ ಮೈತ್ರಿ ಧರ್ಮದಂತೆ ಜೆಡಿಎಸ್ ನಿಂದ ಒಬ್ಬರು ಹಾಗೂ ಬಿಜೆಪಿಯಿಂದ ಒಬ್ಬರು ಮನ್ ಮುಲ್ ಚುನಾವಣೆಗೆ ಸ್ಪರ್ಧಿಸುವುದು ಎಂದಿತ್ತು ಅದರಂತೆ ನಾವು ಜೆಡಿಎಸ್ ಪಕ್ಷದಿಂದ ಮಹೇಶ್ ರನ್ನು ಆಯ್ಕೆಗೊಳಿಸಿದ್ದೆವು, ಈಗ ಬಿಜೆಪಿಯಿಂದ ರೂಪರನ್ನು ಆಯ್ಕೆಮಾಡಿರುವುದರಿಂದ ಅವರೇ ಎನ್.ಡಿ.ಎ ಮೈತ್ರಿ ಕೂಟದ ಅಭ್ಯರ್ಥಿಯಾಗಿದ್ದು, ಇವರಿಬ್ಬರ ಗೆಲುವಿಗೆ ಎರಡೂ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಶಕ್ತಿ ಮೀರಿ ಶ್ರಮಿಸಬೇಕೆಂದರು.
ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಚಾಕನಕೆರೆಗೆ ಬಾಗಿನ ಅರ್ಪಿಸಿದ ಬಗ್ಗೆ ಶಾಸಕ ಕೆ.ಎಂ.ಉದಯ್ ಲಘುವಾಗಿ ಮಾತನಾಡಿರುವುದು ಸರಿಯಲ್ಲ 10 ವರ್ಷಗಳ ಹಿಂದೆ ದುಸ್ಥಿತಿಯಲ್ಲಿದ್ದ ಕೆರೆಗೆ ಪೈಪ್ ಲೈನ್ ಮಾಡಿಸಿ ನೀರು ತುಂಬಿಸಲು ಯೋಜನೆ ರೂಪಿಸಿದವನು ನಾನು ಎಂದರು.
ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ಇನ್ನೂ ಬಿಡಿಗಾಸನ್ನು ನೀಡಿಲ್ಲ ಎಂದು ವೇದಿಕೆಯೊಂದರಲ್ಲಿ ಶಾಸಕ ಕೆ.ಎಂ.ಉದಯ್ ಅವರು ಆರೋಪ ಮಾಡಿರುವ ಸಂಬಂಧ ಮಾತನಾಡಿ, ಜಿಲ್ಲೆಗೆ ಎಚ್.ಡಿ.ಕುಮಾರಸ್ವಾಮಿ ಹಾಗೂ ನಾನು ತಾಲೂಕಿಗೆ ಯಾವ ರೀತಿ ಅಭಿವೃದ್ದಿ ಏನು ಮಾಡಿದ್ದೇವೆ ಎಂದು ಜನರಿಗೆ ತಿಳಿದಿದೆ ಎಂದು ತಿರುಗೇಟು ನೀಡಿದರು.
ನಾಗಮಂಗಲ ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ಕಾಂಗ್ರೆಸ್ ನಲ್ಲಿ 140 ಮಂದಿ ಶಾಸಕರಿದ್ದರೂ ಏಕೋ ಏನೋ ಅನಿಶ್ಚಿತತೆ ಕಾಡುತ್ತಿರಬಹುದೇನೋ ಆದ್ದರಿಂದ ನಮ್ಮ ಪಕ್ಷದ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ನಮ್ಮ ಪಕ್ಷದ ಶಾಸಕರು ಪ್ರಾಮಾಣಿಕರಾಗಿದ್ದಾರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದರು.
ಇದೇ ವೇಳೆ ಮನ್ ಮುಲ್ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳಾದ ಎಸ್.ಮಹೇಶ್, ರೂಪ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಳಿಯಪ್ಪ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೆಗೌಡ, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಎಸ್. ಸತೀಶ್, ಮುಖಂಡರಾದ ಕೂಳಗೆರೆ ಶೇಖರ್, ಕೆ.ಟಿ.ರಾಜಣ್ಣ, ಮಹೇಂದ್ರ, ಹನುಮಂತು, ಮ.ನ.ಪ್ರಸನ್ನ ಕುಮಾರ್, ಶಿವಮಲ್ಲಪ್ಪ, ಸುರೇಶ್, ಶ್ರೀನಿವಾಸ್ ಶೆಟ್ಟಿ, ಗುರುಮಲೇಶ್ ಸೇರಿದಂತೆ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್ ಮಂಡ್ಯ