ಬೆಂಗಳೂರು:– ಲೋಕಸಭಾ ಚುನಾವಣೆ ನಂತರ ವೈಯಕ್ತಿಕ ರಾಜಕಾರಣ ಮಾಡುತ್ತೇನೆ ಎಂದು ಮಾಜಿ ಶಾಸಕ ಸಿ ಟಿ ರವಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನೇನು ರಾಜಕೀಯ ಸನ್ಯಾಸಿಯಲ್ಲ, ಲೋಕಸಭಾ ಚುನಾವಣೆ ಬಳಿಕ ನಾನು ನನ್ನ ವೈಯಕ್ತಿಕ ರಾಜಕಾರಣ ಮಾಡುತ್ತೇನೆ. ಚುನಾವಣೆ ಎನ್ನುವುದು ಇಬ್ಬರ ನಡುವಿನ ಚೆಸ್ ಗೇಮ್ ಅಲ್ಲ, ತಂಡವಾಗಿ ಎಲ್ಲರೂ ಸರಿಯಾಗಿ ಕೆಲಸ ಮಾಡಿದಾಗ ಮಾತ್ರ ಯಶಸ್ಸು ಸಿಗಲಿದೆ. ನಾಯಕ ಸಮನ್ವಯತೆ ಮೂಡಿಸುವ ಕೆಲಸ ಮಾಡಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯಬೇಕು ಎಂದರು.
ನಾನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿ ಆಗಿರಲಿಲ್ಲ, ಹಾಗಾಗಿ ನನಗೆ ಯಾವುದೇ ಅಸಮಾಧಾನ ಇಲ್ಲ. ನಮ್ಮ ಗುರಿ 2024ಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಸರ್ಕಾರ ತರಬೇಕು ಎನ್ನುವುದಾಗಿದೆ. ಮೂರನೇ ಬಾರಿ ಮೋದಿ ಪಿಎಂ ಆಗಬೇಕಾಗಿರುವುದು ದೇಶಕ್ಕಾಗಿ. ಮೋದಿ ನೇತೃತ್ವ, ಬಿಜೆಪಿ ವಿಚಾರಧಾರೆ ಕಾರಣದಿಂದ ಭಾರತ ವಿಶ್ವಗುರುವಾಗಲಿದೆ. ಅದಕ್ಕಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಆ ಕಡೆಗೆ ಮಾತ್ರ ನಮ್ಮ ಗಮನವಿರಲಿದೆ” ಎಂದರು.
ನಾವೇನು ಸನ್ಯಾಸಿಗಳಲ್ಲ, ಈಗೇನಿದ್ದರೂ ಮೋದಿ ಸರ್ಕಾರ ಅಧಿಕಾರಕ್ಕೆ ತರುವುದಷ್ಟೆ ನನ್ನ ಗುರಿ, ಅದಕ್ಕಷ್ಟೇ ಸಮಯ ನೀಡಲಿದ್ದೇನೆ. ನಮ್ಮ ವೈಯಕ್ತಿಕ ರಾಜಕಾರಣ 2024ರ ನಂತರವಾಗಲಿದೆ, ಈಗೇನಿದ್ದರೂ ರಾಷ್ಟ್ರ ಹಿತದ ರಾಜಕಾರಣ, ಮೋದಿ ಸರ್ಕಾರ ಮತ್ತೆ ತರಬೇಕು ಎನ್ನುವುದಷ್ಟೇ ಆಗಿದೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅರ್ಹ ಯೋಗ್ಯತೆ ಬಹಳಷ್ಟು ಜನರಿಗಿದೆ. ಆದರೆ ಯಾವ ಸಂದರ್ಭಕ್ಕೆ ಯಾರು ಸೂಕ್ತ ಎಂದು ಹೈಕಮಾಂಡ್ ನಿರ್ಧರಿಸಲಿದೆ. ಈಗ ಅದನ್ನೇ ಹೈಕಮಾಂಡ್ ಮಾಡಿದೆ” ಎಂದು ಹೇಳಿದರು.