ಬೆಂಗಳೂರು:– ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ನಾನೂ ಆಕಾಂಕ್ಷಿ, ನಾಳೆಯೇ ಹೆಸರು ಪ್ರಕಟವಾಗಲಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಆಯ್ಕೆ ಆಗಿ ಒಂದು ವಾರ ಕಳೆದಿದೆ. ಇದರ ಬೆನ್ನಲ್ಲೇ ಈವರೆಗೆ ಖಾಲಿ ಉಳಿದಿರುವ ಪ್ರತಿಪಕ್ಷ ನಾಯಕನ ಆಯ್ಕೆಗೆ ಕಸರತ್ತು ನಡೆದಿದೆ.”ಹೈಕಮಾಂಡ್ ವೀಕ್ಷಕರ ಸಮ್ಮುಖದಲ್ಲಿ ನಾಳೆ ಪ್ರತಿಪಕ್ಷ ನಾಯಕರ ಆಯ್ಕೆಯಾಗಲಿದೆ. ನನ್ನನ್ನೂ ಸೇರಿ ನಾಲ್ಕೈದು ಜನ ಆಕಾಂಕ್ಷಿಗಳಿದ್ದೇವೆ. ಪಕ್ಷ ಯಾರಿಗೇ ಅವಕಾಶ ನೀಡಿದರೂ ನಾನು ಸ್ವಾಗತ ಮಾಡುತ್ತೇನೆ. ಅವರಿಗೆ ಸಂಪೂರ್ಣ ಸಹಕಾರವನ್ನೂ ನೀಡುತ್ತೇನೆ ಎಂದರು.
ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಪಕ್ಷ ಯಾರನ್ನು ತೀರ್ಮಾನ ಮಾಡುತ್ತದೋ ಅವರಿಗೆ ಒಲಿಯುತ್ತದೆ. ನಾವಂತೂ ಅರ್ಜಿ ಹಾಕಿಲ್ಲ. ಅರ್ಜಿ ಹಾಕುವ ಸಂಸ್ಕೃತಿಯೂ ನಮ್ಮಲ್ಲಿ ಇಲ್ಲ. ಪಕ್ಷ ಈಗಾಗಲೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರನ್ನು ಘೋಷಣೆ ಮಾಡಿದೆ. ಪ್ರತಿಪಕ್ಷ ನಾಯಕ ಸ್ಥಾನ ಕೂಡಾ ಪ್ರಮುಖ ಹುದ್ದೆ. ಈಗಾಗಲೇ ಅಭಿಪ್ರಾಯ ಸಂಗ್ರಹಣೆ ಆಗಿದೆ. ನಾಳೆ ವೀಕ್ಷಕರು ಬಂದು ಘೋಷಣೆ ಮಾಡುವುದಷ್ಟೇ ಬಾಕಿ ಇದೆ. ಯಾರೇ ನೇಮಕ ಆದರೂ ನನ್ನ ತಕರಾರು ಇಲ್ಲ. ನನ್ನನ್ನೂ ಸೇರಿದಂತೆ ನಾಲ್ಕೈದು ಜನ ಆಕಾಂಕ್ಷಿಗಳಿದ್ದಾರೆ ಅಂತಾ ನನಗೂ ಗೊತ್ತಿದೆ. ನಿನ್ನೆ ನಾನು ಸುನೀಲ್ ಕುಮಾರ್ ಮತ್ತು ಅಶ್ವತ್ಥ ನಾರಾಯಣ ಅವರ ಜೊತೆ ಮಾತನಾಡಿದ್ದೇನೆ. ಯಾರಿಗೇ ಅವಕಾಶ ಸಿಕ್ಕರೂ ಸ್ವಾಗತಿಸಿ, ನಾನು ಸಹಕಾರ ನೀಡುತ್ತೇನೆ” ಎಂದರು.