ಶಿವಮೊಗ್ಗ:– ಮುಸ್ಲಿಂ ನಾಯಕರಿಗೆ ತಲೆಬಾಗಬೇಕು ಎಂಬುದಕ್ಕೆ ನನ್ನ ವಿರೋಧವಿದೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಕಾಂಗ್ರೆಸ್ ಸರ್ಕಾರ ಭಾರತದ ಸಂವಿಧಾನ ಪ್ರಕಾರ ಆಡಳಿತ ನಡೆಸುತ್ತಿದೆಯಾ? ಇಲ್ಲ ಪಾಕಿಸ್ತಾನದ ಇಸ್ಲಾಮಿಕ್ ಪ್ರಕಾರ ಆಡಳಿತ ನಡೆಸುತ್ತಿದೆಯಾ? ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಬೇಕು ಎಂದರು.
ಸಚಿವ ಜಮೀರ್ ಅಹಮ್ಮದ್ ಅವರು ತೆಲಂಗಾಣದಲ್ಲಿ ಪ್ರಚಾರಕ್ಕೆ ಹೋದಾಗ ಮುಸ್ಲಿಂ ಸಭಾಧ್ಯಕ್ಷರಿಗೆ ಎಲ್ಲರೂ ತಲೆಬಾಗಿ ವಿಧಾನಸಭೆ ಚಟುವಟಿಕೆ ನಡೆಸಬೇಕು ಎಂದಿದ್ದಾರೆ. ಮುಸ್ಲಿಂ ನಾಯಕರಿಗೆ ತಲೆಬಾಗಬೇಕು ಎಂಬುದಕ್ಕೆ ನನ್ನ ವಿರೋಧವಿದೆ. ನಾವು ಗೌರವ ಕೊಡುತ್ತಿರುವುದು ಖಾದರ್ ಅನ್ನೋ ಬೋಳಪ್ಪ ಇದ್ದಾನೆ ಅಂತಲ್ಲ. ದೇಶದ ಸಂವಿಧಾನ ಹಾಗೂ ಸ್ಪೀಕರ್ ಸ್ಥಾನಕ್ಕೆ.
ಈ ರೀತಿ ರಾಷ್ಟ್ರದ್ರೋಹಿ ಹೇಳಿಕೆ ನೀಡಿರುವ ಜಮೀರ್ ಅಹಮ್ಮದ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು. ಜಮೀರ್ ಹೇಳಿಕೆಗೆ ಮುಂದಿನ ಚುನಾವಣೆಯಲ್ಲಿ ಹಿಂದುಗಳು, ಮುಸ್ಲಿಮರು ಸೇರಿ ಉತ್ತರ ಕೊಡುತ್ತಾರೆ. ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಏಕೆ, ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಗಂಭೀರವಾಗಿ ಜಮೀರ್ ಅಹಮ್ಮದ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಸುವಂತೆ ಸೂಚನೆ ನೀಡಬೇಕು. ಈ ವಿಷಯದಲ್ಲಿ ಹಿಂದೂಗಳು ಜಾಗೃತರಾಗಬೇಕು. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕಿದೆ ಎಂದರು.