ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ ಭಾರತದ ಅನುಭವಿ ಬೌಲರ್ ಜಸ್ ಪ್ರೀತ್ ಬುಮ್ರಾ ಅವರ ಭಯವಿದೆ ಎಂದು ನಾಯಕ ಪ್ಯಾಟ್ ಕಮ್ಮಿನ್ಸ್ ಹೇಳಿದ್ದಾರೆ.ಆಸ್ಟ್ರೇಲಿಯಾದ ನೆಲದಲ್ಲಿ ಜಸ್ ಪ್ರೀತ್ ಬುಮ್ರಾ ಇದುವರೆಗೂ 7 ಪಂದ್ಯಗಳನ್ನಾಡಿದ್ದು, ಒಂದು ಐದು ವಿಕೆಟ್ ಸಾಧನೆಯೊಂದಿಗೆ 21.25 ಸರಾಸರಿಯಲ್ಲಿ 32 ವಿಕೆಟ್ ಪಡೆದಿದ್ದಾರೆ. ಮುಂಬರುವ ಟೆಸ್ಟ್ ಸರಣಿಯಲ್ಲೂ ಟೀಮ್ ಇಂಡಿಯಾ ಜಯಿಸಲು ಬುಮ್ರಾ ಅನುಭವ ನೆರವಿಗೆ ಬರಲಿದೆ.
ಮುಂಬರುವ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಜಸ್ ಪ್ರೀತ್ ಬುಮ್ರಾ ಅವರ ಅನುಭವ ನೆರವಿಗೆ ಬರಲಿದೆ. ನಾನು ಬುಮ್ರಾ ಅವರ ಅಭಿಮಾನಿ ಆಗಿದ್ದು, ಆಸ್ಟ್ರೇಲಿಯಾ ಟೆಸ್ಟ್ ಸರಣಿ ಜಯಿಸಬೇಕಾದರೆ ಬುಮ್ರಾ ವಿರುದ್ಧ ಪ್ರಾಬಲ್ಯ ಸಾಧಿಸಬೇಕಾಗಿದೆ ಎಂದು ಕಮ್ಮಿನ್ಸ್ ಹೇಳಿದ್ದಾರೆ.
“ಜಸ್ ಪ್ರೀತ್ ಅದ್ಭುತ ಬೌಲರ್ ಆಗಿದ್ದು, ನಾನು ಆತನ ಅಪ್ಪಟ ಅಭಿಮಾನಿ ಆಗಿದ್ದೇನೆ. ಬುಮ್ರಾ ಬೌಲಿಂಗ್ ವಿರುದ್ಧ ಸುದೀರ್ಘ ಪ್ರಾಬಲ್ಯ ಸಾಧಿಸಿದರೆ ನಾವು ಸುಲಭವಾಗಿ ಸರಣಿ ಗೆಲ್ಲಬಹುದು. ಆಸ್ಟ್ರೇಲಿಯಾಕ್ಕೆ ಬುಮ್ರಾ ಜೊತೆಗೆ ಬರುವ ಇತರ ವೇಗದ ಬೌಲರ್ ಗಳಿಗೆ ಈ ನೆಲದಲ್ಲಿ ಆಡಿದ ಸಾಕಷ್ಟು ಅನುಭವವಿಲ್ಲ. ಆದರೂ ಅವರು ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂಬುದನ್ನು ನಿರೀಕ್ಷಿಸಬೇಕು,” ಎಂದು ಪ್ಯಾಟ್ ಕಮ್ಮಿನ್ಸ್ ಸ್ಟಾರ್ ಸ್ಪೋರ್ಟ್ಸ್ ಗೆ ತಿಳಿಸಿದ್ದಾರೆ.