ಬೆಂಗಳೂರು: ಶ್ರೀಕಾಂತ್ ಬಂಧನ ಖಂಡಿಸಿ ಬಿಜೆಪಿ ನಾಯಕರು ‘ನಾನು ಕರಸೇವಕ.. ನನ್ನನ್ನೂ ಬಂಧಿಸಿ’ ಅಭಿಯಾನ ನಡೆಸುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೌಂಟರ್ ಕೊಟ್ಟಿದೆ.
ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದ ಬಿಜೆಪಿ ನಾಯಕರ ಫೋಟೋಗಳನ್ನು ಎಡಿಟ್ ಮಾಡಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಕಾಂಗ್ರೆಸ್, ಬಿಜೆಪಿ ನಾಯಕರು ನಿಜವಾಗಿಯೂ ಹಿಡಿದು ಕೂರಬೇಕಾದ ಪೋಸ್ಟರ್ ಹೀಗಿರಬೇಕು ಎಂದು ಪೋಸ್ಟ್ ಮಾಡಿದ್ಧಾರೆ.
‘ನಾನು ಕರಸೇವಕ.. ನನ್ನನ್ನೂ ಬಂಧಿಸಿ’ ಎಂಬ ಪೋಸ್ಟರ್ ಹಿಡಿದು ಪೊಲೀಸ್ ಠಾಣೆ ಎದುರು ಮಾಜಿ ಸಚಿವ ಸಿ.ಟಿ.ರವಿ ಗುರುವಾರ ಪ್ರತಿಭಟನೆ ನಡೆಸಿದ್ದರು. ಇದರ ಫೋಟೋವನ್ನು ಎಡಿಟ್ ಮಾಡಿ ಕಾಂಗ್ರೆಸ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ.
‘ನಾನು ಕಾರು ಚಲಾಯಿಸಿ ಇಬ್ಬರ ಹತ್ಯೆ ಮಾಡಿದ್ದೇನೆ.. ನನ್ನನ್ನೂ ಬಂಧಿಸಿ’ ನಿಮ್ಮನ್ನು ಬಂಧಿಸಬೇಕಾದ ಕಾರಣಗಳು ಬೇರೆ ಇವೆಯಲ್ಲವೇ’ಎಂದು ಸಿ.ಟಿ.ರವಿಗೆ ಕಾಂಗ್ರೆಸ್ ಠಕ್ಕರ್ ಕೊಟ್ಟಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕೈಯಲ್ಲಿ, ‘ನಾನು ಆರ್ಟಿಜಿಎಸ್ ಮೂಲಕ ಲಂಚ ಪಡೆದಿದ್ದೇನೆ. 40,000 ಕೋಟಿಯ ಅಕ್ರಮದಲ್ಲಿ ಪಾಲುದಾರ.. ನನ್ನನ್ನೂ ಬಂಧಿಸಿ’ ಎಂದು ಬರೆದಿರುವ ಪೋಸ್ಟರ್ ಹಿಡಿಸಿ ಠಕ್ಕರ್ ಕೊಟ್ಟಿದೆ.
ಬಿಜೆಪಿ ಅಧ್ಯಕ್ಷರಾದ ವಿಜಯೇಂದ್ರ ಅವರು ಈ ಪೋಸ್ಟರ್ ಹಿಡಿದು ಕುಳಿತರೆ ಸೂಕ್ತ. ಬಿಜೆಪಿಗರೆಲ್ಲರೂ ‘ನನ್ನನ್ನು ಬಂಧಿಸಿ’ ಎಂದು ಒತ್ತಾಯಿಸುತ್ತಿರುವುದು ತಾವು ಮಾಡಿದ ಅಕ್ರಮಗಳ, ಹಗರಣಗಳ ಪ್ರಾಯಶ್ಚಿತ್ತಕ್ಕಾಗಿಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಾನು ಪರಶುರಾಮನ ಮೂರ್ತಿಯ ಕಂಚನ್ನು ಕದ್ದಿದ್ದೇನೆ. ಸರ್ಕಾರಿ ಸಿಮೆಂಟ್ ಕದ್ದಿದ್ದೇನೆ. ನನ್ನನ್ನೂ ಬಂಧಿಸಿ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಅವರ ಫೋಟೋ ಕೂಡ ಎಡಿಟ್ ಮಾಡಿ ಕಾಂಗ್ರೆಸ್ ಹಂಚಿಕೊಂಡಿದೆ. ನನ್ನನ್ನು ಬಂಧಿಸಿ ಎನ್ನುತ್ತಿರುವ ಸುನಿಲ್ ಕುಮಾರ್ ಅವರೇ, ಪರಶುರಾಮ ಮೂರ್ತಿಗೆ ಕಂಚಿನ ಬದಲು ಫೈಬರ್ ಹಾಕಿದ್ದಕ್ಕೆ ನಿಮ್ಮನ್ನು ಬಂಧಿಸಬೇಕೆ? ಅಥವಾ ಸರ್ಕಾರದ ಸಿಮೆಂಟ್ ಕಳ್ಳತನದ ಆರೋಪಕ್ಕಾಗಿ ಬಂಧಿಸಬೇಕೆ? ರಾಮನ ಹೆಸರಲ್ಲಿ ರಾವಣನ ಕೆಲಸ ಮಾಡುವ ಆರೋಪಿಗಳನ್ನು ಬಂಧಿಸಬೇಕಲ್ಲವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಾನು 40% ಕಮಿಷನ್ ನುಂಗಿ ಸಂತೋಷ್ ಪಾಟೀಲ್ ಸಾವಿಗೆ ಕಾರಣನಾಗಿದ್ದೇನೆ. ನನ್ನನ್ನೂ ಬಂಧಿಸಿ ಎಂಬ ಪೋಸ್ಟರ್ ಹಿಡಿಸಿ ಮಾಜಿ ಸಚಿವ ಈಶ್ವರಪ್ಪಗೆ ತಿರುಗೇಟು ನೀಡಲಾಗಿದೆ. ಈಶ್ವರಪ್ಪ ಅವರು ಹಿಡಿಯಬೇಕಾದ ಪೋಸ್ಟರ್ ಇದು! ನ್ಯಾಯಾಲಯದಲ್ಲಿ ಬಿಜೆಪಿಗರ ಅಕ್ರಮಗಳು, ಅನಾಚಾರಗಳು, ಹಗರಣಗಳು ಸಾಬೀತಾದರೆ ನನ್ನನ್ನೂ ಬಂಧಿಸಿ ಎಂದು ಹೇಳುವುದೇ ಬೇಡ, ಬಂಧನ ಆಗೇ ಆಗುತ್ತದೆ ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ನಾನು ಸಂಸತ್ ದಾಳಿಕೋರರಿಗೆ ಪಾಸ್ ಕೊಟ್ಟು ಸಹಕರಿಸಿದ್ದೇನೆ. ನನ್ನನ್ನೂ ಬಂಧಿಸಿ ಎಂದು ಸಂಸದ ಪ್ರತಾಪ್ ಸಿಂಹ ಅವರ ಕೈಯಲ್ಲಿ ಪೋಸ್ಟರ್ ಹಿಡಿಸಿ ಕಾಂಗ್ರೆಸ್ ಟಾಂಗ್ ಕೊಟ್ಟಿದೆ. ಪ್ರತಾಪ್ ಸಿಂಹ ಅವರೇ, ನೀವು ಈ ಪೋಸ್ಟರ್ ಹಿಡಿದು ಕೂರುವ ಧೈರ್ಯ ತೋರಿಸಿ, ನಿಮ್ಮವರೇ ಹೇಳುವ ದಮ್ಮು, ತಾಕತ್ತು ಪ್ರದರ್ಶಿಸಿ ಎಂದು ವಾಗ್ದಾಳಿ ನಡೆಸಿದೆ.