ಬೆಂಗಳೂರು : ಪಕ್ಷಕ್ಕೆ ನನ್ನದೂ ದುಡಿಮೆ, ಶ್ರಮ ಇದೆ. ನನಗೆ ಡಬಲ್ ಗೇಮ್ ಮಾಡೋದು ಗೊತ್ತಿಲ್ಲ. ನನ್ನ ಅಭಿಪ್ರಾಯವನ್ನ ಮುಂದೆ ತಿಳಿಸುತ್ತೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಅಸಮಾಧಾನ ಹೊರಹಾಕಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಒಬ್ಬ ಕೆಲಸ ಮಾಡುವವನಿಗೆ, ಪಾಪ್ಯುಲರ್ ಆದವರಿಗೆ ಮುಜುಗರ ಸಂಗತಿಗಳು ಆಗುತ್ತೆ. ನಾನು ಯಾವುದೇ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ತಮ್ಮೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಅದೆಲ್ಲಾ ನಡೆಯುತ್ತಿರುತ್ತೆ. ಆದರೆ, ಕಾಂಗ್ರೆಸ್ ಸೇರುವ ಅವಶ್ಯಕತೆ ನನಗೆ ಈಗ ಇಲ್ಲ. ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ಕಾರ್ಯಕ್ರಮ ಇದೆ. ಹಿಂದಿನ ಶ್ರೀಗಳು ಹೇಳಿದ್ದಂತೆ ಕುಟುಂಬದಿಂದ ಕೆಲಸ ಮಾಡಿಸಿದ್ದಂತೆ, ಅದರ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಿದ್ಧಗಂಗಾ ಮಠದಲ್ಲಿ ಸಮಾರಂಭದಲ್ಲಿ ಶಕ್ತಿ ಪ್ರದರ್ಶನವೇ? ಎಂಬ ಸುದ್ದಿಗಾರರ ಪ್ರಶ್ನೆಗೆ, ಮಠದಲ್ಲಿ ಕಾರ್ಯಕ್ರಮ ಮಾಡಿ ಶಕ್ತಿ ಪ್ರದರ್ಶನ ಮಾಡುವ ಅವಶ್ಯಕತೆ ನನಗಿಲ್ಲ. ಸಹಜವಾಗಿ ಉದ್ಘಾಟನೆಗೆ ಆಡಳಿತದಲ್ಲಿರುವವರು ಬರ್ತಾರೆ. ಗೃಹ ಸಚಿವ ಡಾ.ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ, ಸಂಸದ ಜಿ.ಎಸ್. ಬಸವರಾಜ್, ಸ್ಥಳೀಯ ಶಾಸಕರನ್ನ ಕರೆದಿದ್ದೇನೆ ಎಂದು ಹೇಳಿದರು.