ಕೋಲ್ಕತ್ತಾ: ಸಂಘಟಿತ ಬ್ಯಾಟಿಂಗ್, ಬೌಲಿಂಗ್ ನೆರವಿನಿಂದ ಇಂಗ್ಲೆಂಡ್ (England) ತಂಡ ಪಾಕಿಸ್ತಾನದ ವಿರುದ್ಧ 93 ರನ್ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ 2023ರ ವಿಶ್ವಕಪ್ ಆವೃತ್ತಿಗೆ ವಿದಾಯ ಹೇಳಿದರೆ, ಭಾರತದಲ್ಲಿ ವಿಶ್ವಕಪ್ (World Cup 2023) ಗೆದ್ದು ಬರುತ್ತೇವೆ ಎಂದು ಬೀಗಿದ್ದ ಪಾಕ್ ತಂಡ ಹೀನಾಯ ಸೋಲಿನೊಂದಿಗೆ ವಿದಾಯ ಹೇಳಿದೆ.
ಕೋಲ್ಕತ್ತಾ ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸಿತ್ತು. 338 ರನ್ಗಳ ಗುರಿ ಬೆನ್ನತ್ತಿದ್ದ ಪಾಕ್ (Pakistan) ಅಗ್ರಕ್ರಮಾಂಕದ ಬ್ಯಾಟರ್ಗಳ ವೈಫಲ್ಯದಿಂದ 43.3 ಓವರ್ಗಳಲ್ಲಿ 244 ರನ್ಗಳಿಸಿ ಸರ್ವಪತನ ಕಂಡಿತು.
2021ರ ವಿಶ್ವಕಪ್ ಟೂರ್ನಿ ಹಾಗೂ 2023ರ ಏಷ್ಯಾಕಪ್ ಟೂರ್ನಿಯಲ್ಲೂ ಪಾಕ್ ತಂಡ ನಾಕೌಟ್ ಹಂತದಲ್ಲಿ ಸೋತು ನಿರಾಸೆ ಅನುಭವಿಸಿತ್ತು. 2022ರ ಏಷ್ಯಾಕಪ್ ಫೈನಲ್ನಲ್ಲಿ ಶ್ರೀಲಂಕಾ ವಿರುದ್ಧ, 2022ರ T20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ ಸೋತು ತವರಿಗೆ ಮರಳಿತ್ತು. ಆದ್ರೆ 2023ರ ಏಕದಿನ ವಿಶ್ವಕಪ್ ಆವೃತ್ತಿಯಲ್ಲಿ ಲೀಗ್ ಸುತ್ತಿನಲ್ಲೇ ಹೊರಬಿದ್ದಿರುವುದು ಪಾಕ್ಗೆ ತೀವ್ರ ಮುಖಬಂಗವಾಗಿದೆ.