ಪ್ರೇಕ್ಷಕರಿಂದ ಹಾಗೂ ಸೆಲೆಬ್ರಿಟಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡದುಕೊಳ್ಳುವಲ್ಲಿ ಕಾಟೇರ ಚಿತ್ರ ಮುಂಚೂಣಿಯಲ್ಲಿದೆ.
2023ರ ಕೊನೆಯಲ್ಲಿ ಬಿಡುಗಡೆಯಾದ ಚಿತ್ರವು ಈವರೆಗೂ 104.58 ಕೋಟಿ ರೂಪಾಯಿ ಕಮಾಯಿ ಮಾಡಿದೆ ಎಂದು ತಿಳಿದು ಬಂದಿದೆ. ವಾರದ ದಿನಗಳಲ್ಲೂ ಚಿತ್ರ ಉತ್ತಮ ಗಳಿಕೆ ಕಂಡಿದ್ದು, ಬಿಡುಗಡೆಯಾದ ಒಂದೇ ವಾರದಲ್ಲಿ ಚಿತ್ರ 100 ಕೋಟಿ ರೂಪಾಯಿ ಗಳಿಕೆ ಮಾಡಿರುವುದು ಮತ್ತಷ್ಟು ವಿಶೇಷವೆನ್ನಿಸಿದೆ.
ಚಿತ್ರತಂಡದವರು ಹೇಳಿರುವ ಪ್ರಕಾರ ಸಿನಿಮಾ ಏಳು ದಿನಕ್ಕೆ 104.58 ಕೋಟಿ ರೂಪಾಯಿ ಬಾಚಿಕೊಂಡಿದೆ. ಕನ್ನಡದಲ್ಲಿ ರಿಲೀಸ್ ಆಗಿ ಕಾಟೇರ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ನಮ್ಮೆಲ್ಲರ ಖುಷಿ ಹೆಚ್ಚಿಸಿದೆ. ಟಾಲಿವುಡ್ ಹಾಗೂ ಕಾಲಿವುಡ್ನಲ್ಲೂ ಕಾಟೇರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲಿಂದಲೂ ಸಿನಿಮಾಗೆ ಬೇಡಿಕೆ ಬರುತ್ತಿದ್ದು, ಡಬ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಚಿತ್ರತಂಡದ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಏಳು ದಿನಕ್ಕೆ ಕಾಟೇರ ಚಿತ್ರದ 52.77 ಲಕ್ಷ ಟಿಕೆಟ್ ಮಾರಾಟ ಆಗಿದ್ದು, ಕಳೆದ ಏಳು ದಿನಗಳಲ್ಲಿ 10,961 ಪ್ರದರ್ಶನಗಳು ಕಂಡಿವೆ. ಈ ಪೈಕಿ 6,117 ಶೋಗಳು ಹೌಸ್ಫುಲ್ ಆಗಿವೆ ಎಂದು ತಿಳಿದು ಬಂದಿದೆ. ಡಿಸೆಂಬರ್ 29 (19.79), ಡಿಸೆಂಬರ್ 30 (17.35), ಡಿಸೆಂಬರ್ 31 (20.94), ಜನವರಿ 01 (18.26), ಜನವರಿ 02 (09.24), ಜನವರಿ 03 (09.78), ಜನವರಿ 04 (09.52) ಕೋಟಿ ರೂಪಾಯಿ ಕಮಾಯಿ ಮಾಡಿದೆ.