ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆ ಹಾಗೂ ಇತರ ಕಾರಣಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಶಾಲಾ ಕೊಠಡಿಗಳ ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿತ್ತು. ಆದರೆ ವಿವಿಧ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್ಆರ್ ಫಂಡ್)ಯಿಂದ ಅಭಿವೃದ್ಧಿ ಕಾಣುವಂತಾಗಿದೆ.
ಜಿಲ್ಲೆಯಲ್ಲಿ ಮಳೆ, ಹಳೇ ಕಟ್ಟಡ ಹೀಗೆ ಅನೇಕ ಕಾರಣಗಳಿಂದ 374 ಶಾಲೆಗಳ 1009 ಕೊಠಡಿಗಳು ಹಾಳಾಗಿದ್ದವು. ಅವುಗಳ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡುವಂತೆ ಕೆಲ ವರ್ಷಗಳ ಹಿಂದೆಯೇ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ಆಯ್ದ 6 ತಾಲೂಕುಗಳಲ್ಲಿನ ಶಾಲಾ ಕೊಠಡಿಗಳನ್ನು ಸಿಎಸ್ಆರ್ ನಿಧಿ ಮೂಲಕ ಕೊಠಡಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಸದ್ಯಕ್ಕೆ ಕೋಲ್ ಇಂಡಿಯಾ ಕಂಪನಿ 21.54 ಕೋಟಿ ರೂ. ವ್ಯಯಿಸಿ ಜಿಲ್ಲೆಯ 141 ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ 129 ಕಾಮಗಾರಿಗಳು ಆರಂಭವಾಗಿದ್ದು, 11 ಕಾಮಗಾರಿಗಳು ಮುಕ್ತಾಯವಾಗಿವೆ. ಉಳಿದ ಕಾಮಗಾರಿಗಳಲ್ಲಿ ಕೆಲವು ತಳಪಾಯ ಹಂತದಲ್ಲಿದ್ದರೆ, ಕೆಲವು ಲಿಂಟಲ್, ಸ್ಲಾೃಬ್ ಹಂತದಲ್ಲಿವೆ.
ಇತ್ತೀಚಿನ ದಿನಗಳಲ್ಲಿ ಬಹುತೇಕ ಕಂಪನಿಗಳು ಸಿಎಸ್ಆರ್ ನಿಧಿಯನ್ನು ಸರ್ಕಾರಿ ಶಾಲಾಭಿವೃದ್ಧಿಗೆ ವಿನಿಯೋಗ ಮಾಡುತ್ತಿವೆ. ಸದ್ಯ ಜಿಲ್ಲೆಯ 141 ಕೊಠಡಿಗಳ ದುರಸ್ತಿಗೆ ಅನುದಾನ ಸಿಕ್ಕಿದ್ದು, ಇನ್ನೂ ಹತ್ತಾರು ಕಂಪನಿಗಳು ಮುಂದಿ ಬಂದಿವೆ.
ಹೀಗಾಗಿ ಉಳಿದ ಶಾಲೆಗಳ ಅಭಿವೃದ್ಧಿಗೆ ಸಹ ಇಲಾಖೆ ಚಿಂತನೆ ನಡೆಸಿದ್ದು, ಶಾಲೆಗಳಲ್ಲಿ ಆಗಬೇಕಿರುವ ಕಾರ್ಯಗಳು ಕುರಿತ ಪಟ್ಟಿಯನ್ನು ಕಂಪನಿಗಳಿಗೆ ಸಹ ನೀಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಯತ್ನದಿಂದಲೇ ಜಿಲ್ಲೆಗೆ ಇಷ್ಟು ಪ್ರಮಾಣದಲ್ಲಿ ಸಿಎಸ್ಆರ್ ಅನುದಾನ ಸಿಗಲು ಕಾರಣವಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಕೇಂದ್ರ ಸರ್ಕಾರದ ಆದೇಶದಂತೆ ಕೈಗಾರಿಕೆಗಳು ಲಾಭಾಂಶದಲ್ಲಿ ಶೇ. 2ರಷ್ಟು ಹಣವನ್ನು ಸಮಾಜಿಕ ಹೊಣೆಗಾರಿಕೆಗೆ ಸಂಬಂಧಿಸಿದ ಕಾಮಗಾರಿ ಹಾಗೂ ಸೌಲಭ್ಯಗಳಿಗೆ ಬಳಕೆ ಮಾಡುವುದು ಕಡ್ಡಾಯ. ವಾರ್ಷಿಕವಾಗಿ ಸಾವಿರ ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ನಡೆಸುವ ಕೈಗಾರಿಕೆಗಳು ಈ ಕಾರ್ಯ ಮಾಡಬೇಕಿದೆ. ಹೀಗಾಗಿ ಬಹುತೇಕ ಕಂಪನಿಗಳು ಶಾಲಾಭಿವೃದ್ಧಿಗೆ ಈ ಹಣವನ್ನು ಬಳಕೆ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಎಲ್ಲಿ, ಎಷ್ಟು ಕೊಠಡಿಗಳು?: ಜಿಲ್ಲೆಯಲ್ಲಿ ಸಿಎಸ್ಆರ್ ನಿಧಿ ಬಳಸಿಕೊಂಡು ಒಟ್ಟು 141 ಶಾಲಾ ಕೊಠಡಿಗಳು ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಈ ಪೈಕಿ ಧಾರವಾಡ ಗ್ರಾಮೀಣ 19, ಧಾರವಾಡ ಶಹರ 22, ಹುಬ್ಬಳ್ಳಿ ಗ್ರಾಮೀಣ 15, ಕಲಘಟಗಿ 29, ಕುಂದಗೋಳ 32 ಹಾಗೂ ನವಲಗುಂದದಲ್ಲಿ 24 ಕೊಠಡಿಗಳು ಅಭಿವೃದ್ಧಿಯಾಗಲಿವೆ.
ಇನ್ನು ಡಿಡಿಪಿಐ ಎಸ್ .ಎಸ್. ಕೆಳದಿಮಠ ಈ ಕುರಿತು ಮಾಹಿತಿ ನೀಡಿದ್ದು ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ. ವಿವೇಕ ಯೋಜನೆ ಅಡಿ 295 ಹಾಗೂ ಸಿಎಸ್ಆರ್ ನಿಧಿ ಅಡಿ 141 ಕೊಠಡಿಗಳು ಸಿದ್ಧವಾಗುತ್ತಿವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವದ ಮೇರೆಗೆ ಕಂಪನಿಯವರು ಸಿಎಸ್ಆರ್ ನಿಧಿ ನೀಡಿದ್ದಾರೆ. ಕಂಪನಿಯವರು ಹಣ ಬಿಡುಗಡೆ ಮಾಡಿದ ಬಳಿಕ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.