ಹುಬ್ಬಳ್ಳಿ: ‘ಪೌರಕಾರ್ಮಿಕರಿಗೆ ನೇರ ನೇಮಕಾತಿ ಆದೇಶ ಪತ್ರ ವಿತರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಲಿಕೆ ಕಚೇರಿ ಎದುರು ಪೌರಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಧರಣಿ ಮುಂದುವರೆದಿದ್ದು ಪೌರಕಾರ್ಮಿಕರು ರಕ್ತದಲ್ಲಿ ಪತ್ರ ಬರೆದು ಚಳವಳಿ ನಡೆಸಿದರು.
134 ಪೌರಕಾರ್ಮಿಕರಿಗೆ ನೇರ ನೇಮಕಾತಿಯ ಆದೇಶ ಪತ್ರ ನೀಡಬೇಕು. 799 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಮಾಡಬೇಕು ಎಂಬ ಬೇಡಿಕೆಗಳನ್ನು ರಕ್ತದ ಮೂಲಕ ಪತ್ರದಲ್ಲಿ ಬರೆದು, ಬೇಡಿಕೆಗಳ ಈಡೇರಿಕೆಗೆ ಕ್ರಮವಹಿಸಬೇಕು. ನಿರ್ಲಕ್ಷಿಸಿದರೆ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ರಕ್ತ ಪತ್ರ ಚಳವಳಿಯಲ್ಲಿ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷ ವಿಜಯ ಗುಂಟ್ರಾಳ, ಗಂಗಮ್ಮ ಸಿದ್ರಾಮಪುರ, ಗಾಳೆಪ್ಪಾ ದ್ವಾಸಲಕೇರಿ, ತಾಯಪ್ಪ ಕಣೆಕಲ್ ಕನಕಪ್ಪ ಕೋಟಬಾಗಿ, ಸುಮಿತ್ರಾ ಹೊಸಳ್ಳಿ, ಶಾಂತವ್ವ ಚುರಮುರಿ ಸೇರಿದಂತೆ ಹಲವು ಪೌರಕಾರ್ಮಿಕರು ಭಾಗವಹಿಸಿದ್ದರು.