ಹುಬ್ಬಳ್ಳಿ: ಸಾಲ ಪಡೆದಿದ್ದ ಗೆಳೆಯ ಮೂರು ತಿಂಗಳಿನ ಬಳಿಕ ಸಾಲ ಮರಳಿಸದ ಕಾರಣ ಸಾಲ ನೀಡಿದ್ದ ವ್ಯಕ್ತಿಯು ಐದು ಜನರ ಗುಂಪು ಕಟ್ಟಿಕೊಂಡು ಬಂದು ಹಲ್ಲೆ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ನಗರದ ದೊಡ್ಡಮನಿ ಕಾಲೊನಿ ಕ್ರಿಶ್ಚಿಯನ್ ಸ್ಮಶಾನದ ಆವರಣ ಗೋಡೆ ಪಕ್ಕದಲ್ಲಿ ನಡೆದಿದೆ.
ಗದಗ ಮಾರ್ಗದ ಚೇತನಾ ಕಾಲೊನಿ ನಿವಾಸಿ ಚಿನ್ನಾ ನಾ. ಗುಂಟಕಿಪೋಗು ಘಟನೆಯಲ್ಲಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುವಿನ ಪತ್ನಿಯ ಪರವಾಗಿ ಆಕೆಯ ಸಹೋದರಿಯ ಪತಿಯು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಐದು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಮೊದಲ ಆರೋಪಿ ಸುಲೋಮನ್ ಪಲಕುರ್ಕಿ ₹25 ಸಾವಿರ ಸಾಲ ನೀಡಿದ್ದ. ಸಕಾಲಕ್ಕೆ ಸಾಲ ಮರಳಿಸದ ಗೆಳೆಯನ ಮೇಲೆ ಗುಂಪಾಗಿ ಸರಪಳಿ, ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.