ಹುಬ್ಬಳ್ಳಿ: ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಜ. 5ರಿಂದ 8ರವರೆಗೆ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಲೀಗ್ ಹಂತದ ಮೊದಲ ಪಂದ್ಯದಲ್ಲಿ ಸೆಣಸಲಿರುವ ಆತಿಥೇಯ ಕರ್ನಾಟಕ ಹಾಗೂ ಪಂಜಾಬ್ ತಂಡಗಳ ಆಟಗಾರರು ತಡ ರಾತ್ರಿ ನಗರಕ್ಕೆ ಆಗಮಿಸಿದರು
ಕರ್ನಾಟಕ ತಂಡದ ಆಟಗಾರರು ಹಾಗೂ ಸಿಬ್ಬಂದಿ ಗೋಕುಲ ರಸ್ತೆ ವಿಮಾನ ನಿಲ್ದಾಣ ಬಳಿಯ ಫಾರ್ಚೂನ್ ಹೋಟೆಲ್ನಲ್ಲಿ ಮತ್ತು ಪಂಜಾಬ್ ತಂಡದ ಆಟಗಾರರು ಹಾಗೂ ಸಿಬ್ಬಂದಿ ವಿದ್ಯಾನಗರದ ಲೇಮನ್ ಟ್ರೀ ಹೋಟೆಲ್ನಲ್ಲಿ ತಂಗಲಿದ್ದಾರೆ.
ಉಭಯ ತಂಡಗಳ ಆಟಗಾರರು ಬುಧವಾರ ಮತ್ತು ಗುರುವಾರ ರಾಜನಗರ ಮೈದಾನದಲ್ಲಿ ಪಂದ್ಯ ಪೂರ್ವ ಅಭ್ಯಾಸ ನಡೆಸಲಿದ್ದಾರೆ.
ಪ್ರಸಕ್ತ ರಣಜಿ ಋತುವಿನ ಆರಂಭಿಕ ಪಂದ್ಯ ಇದಾಗಿದ್ದು, ಹುಬ್ಬಳ್ಳಿ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಇದಕ್ಕಾಗಿ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.
ರಾಜನಗರ ಕೆಎಸ್ಸಿಎ ಮೈದಾನದಲ್ಲಿ ಮೊದಲ ಬಾರಿ 2012ರಲ್ಲಿ ರಣಜಿ ಪಂದ್ಯ ನಡೆದಿತ್ತು. ಬಳಿಕ ಇಲ್ಲಿ ಹಲವು ರಣಜಿ ಪಂದ್ಯಗಳು, ಅಂತಾರಾಷ್ಟ್ರೀಯ ಚತುರ್ದಿನ (ಎ ತಂಡಗಳು) ಹಾಗೂ ಮಹಿಳಾ ತಂಡಗಳ ನಡುವೆ ಪಂದ್ಯಗಳು ನಡೆದಿವೆ.