ಹುಬ್ಬಳ್ಳಿ: ‘ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದಲ್ಲಿ (ಕೆಎಂಸಿ-ಆರ್ಐ) ಭ್ರಷ್ಟಾಚಾರ ನಡೆಯುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ನಿರ್ದೇಶಕರು ವಿಫಲರಾಗಿದ್ದಾರೆ’ ಎಂದು ಆರೋಪಿಸಿ ಆಮ್ ಆದ್ಮ ಪಕ್ಷದ ಕಾರ್ಯಕರ್ತರು ಕೆಎಂಸಿ-ಆರ್ಐ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
‘ಸಾರ್ವಜನಿಕರ ಆರೋಗ್ಯ ಸುಧಾರಣೆ ಹಾಗೂ ಆಸ್ಪತ್ರೆ ಅಭಿವೃದ್ಧಿಗಾಗಿ ಸರ್ಕಾರದಿಂದ ಪ್ರತಿವರ್ಷ ವಿವಿಧ ಯೋಜನೆಯಡಿ ಸಾವಿರಾರು ಕೋಟಿ ಅನುದಾನ ಬರುತ್ತದೆ. ಸಮರ್ಪಕವಾಗಿ ಬಳಕೆಯಾಗದೆ ಸೋರಿಕೆಯಾಗುತ್ತಿದೆ. ಇಲ್ಲಿ ನಡೆಯುವ ಅನೇಕ ಸಮಸ್ಯೆಗಳ ಕುರಿತು ಈ ಹಿಂದೆಯೇ ಆಡಳಿತ ಮಂಡಳಿ ನಿರ್ದೇಶಕರಿಗೆ ಮೌಖಿಕವಾಗಿ ಹಾಗೂ ಪತ್ರದ ಮುಖೇನ ತಿಳಿಸಲಾಗಿತ್ತು. ಆದರೂ ಈವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಿಯುಸಿ ಪಾಸ್ ಆದವರಿಗೆ ಗುಡ್ ನ್ಯೂಸ್: ಕರ್ನಾಟಕ ಲೋಕಾಯುಕ್ತದಲ್ಲಿದೆ ಭರ್ಜರಿ ಉದ್ಯೋಗಾವಕಾಶ – ಇಂದೇ ಅರ್ಜಿ ಸಲ್ಲಿಸಿ
ಕೆಎಂಸಿ-ಆರ್ಐ ಆವರಣದಲ್ಲಿ ನಾಯಿಕೊಡೆಗಳಂತೆ ಸಾಕಷ್ಟು ಅಂಗಡಿಗಳು ತಲೆ ಎತ್ತಿವೆ. ಅವುಗಳಲ್ಲಿ ಬಹುತೇಕ ಅಂಗಡಿಗಳು ಗುತ್ತಿಗೆ ಪಡೆಯದೇ ಬಾಹಿರವಾಗಿ ವ್ಯಾಪಾರ ನಡೆಸುತ್ತಿವೆ. ಯಾವ ಕಾಗದ ಪತ್ರಗಳು ಸಹ ಅವರ ಬಳಿಯಿಲ್ಲ. ತಕ್ಷಣ ಅವುಗಳನ್ನು ತೆರವುಗೊಳಿಸಬೇಕು. ಉತ್ತರ ಕರ್ನಾಟಕ ಭಾಗದ ವಿಜಯಪುರ, ಕೊಪ್ಪಳ, ಗದಗ, ಹಾವೇರಿ, ಉತ್ತರ ಕನ್ನಡ, ಧಾರವಾಡ ಸೇರಿದಂತೆ ವಿವಿಧ ಭಾಗಗಳಿಂದ ನಿತ್ಯ ಸಾವಿರಾರು ರೋಗಿಗಳು ಆಸ್ಪತ್ರೆಗೆ ಬರುತ್ತಾರೆ.
ನೂರಾರು ಮಂದಿ ಒಳರೋಗಿಗಳಾಗಿ ದಾಖಲಾಗುತ್ತಾರೆ. ರೋಗಿಗಳ ಜೊತೆಗೆ ಬಂದವರಿಗೆ ವಾಸಿಸಲು ಹಾಗೂ ವಾಹನಗಳ ಪಾರ್ಕಿಂಗ್ಗೆ ಸರಿಯಾದ ಸ್ಥಳವಿಲ್ಲ. ಆವರಣದ ತುಂಬ ದೂಳು ಆವರಿಸಿದ್ದು, ಮತ್ತಷ್ಟು ಸಮಸ್ಯೆ ಎದುರಿಸುವಂತಾಗಿದೆ. ವೈದ್ಯರ ಹಾಗೂ ಇತರ ಸಿಬ್ಬಂದಿ ಕಾರ್ಯವೈಖರಿ ಬಗ್ಗೆಯೂ ಆರೋಪಗಳಿದ್ದು, ತಕ್ಷಣ ಅವುಗಳನ್ನೆಲ್ಲ ಸರಿಪಡಿಸಬೇಕು’ ಎಂದು ಆಗ್ರಹಿಸಿದರು. ಕೆಎಂಸಿ-ಆರ್ಐ ನಿರ್ದೇಶಕ ಡಾ.ಎಸ್.ಎಫ್. ಕಮ್ಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಬಸವರಾಜ ತೇರದಾಳ, ಸಂಜೀವ ಬೆಳಗೇರಿ ಹಾಗೂ ಕಾರ್ಯಕರ್ತರು ಇದ್ದರು.