ಹುಬ್ಬಳ್ಳಿ: ಧಾರವಾಡ ಉಪನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ದಯಾನಂದ ಶೇಗುಣಸಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ₹8.25 ಲಕ್ಷ, ಅವರ ಗಮನಕ್ಕೆ ಬರದೆ ಆನ್ಲೈನ್ಲ್ಲಿ ವರ್ಗಾವಣೆ ಆಗಿರುವ ಕುರಿತು ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಾರೊಂದಿಗೂ ವೈಯಕ್ತಿಕ ಮಾಹಿತಿ ಹಂಚಿಕೊಳ್ಳದಿದ್ದರೂ ಹಣ ವರ್ಗಾವಣೆಯಾಗಿದೆ. ಬ್ಯಾಂಕ್ನವರು ಸೆಕ್ಯೂರ್ ಇರುವ ನೆಟ್ ಸೆಕ್ಯೂರಿಟಿ ಬಳಸದೆ ನಿಷ್ಕಾಳಜಿಯಿಂದಲೋ ಅಥವಾ ಯಾವುದೋ ಅಧಿಕಾರಿಯ ಹಸ್ತಕ್ಷೇಪದಿಂದ ಅಪರಿಚಿತ ವ್ಯಕ್ತಿ ಹಣ ವರ್ಗಾಯಿಸಿಕೊಂಡಿದ್ದಾನೆ. ಬ್ಯಾಂಕ್ ಖಾತೆಗೆ ಲಿಂಕ್ ಇರುವ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದ ಸಂದರ್ಭ, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ₹50 ಸಾವಿರ 12 ಬಾರಿ, ₹45 ಸಾವಿರ ಮೂರು ಬಾರಿ, ₹25ಸಾವಿರ ಎರಡು ಬಾರಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಬ್ಯಾಂಕ್ ನಿಷ್ಕಾಳಜಿಯಿಂದಲೂ ಆಗಿರಬಹುದು. ಅಥವಾ ಹೊಸ ಬಗೆಯ ಸೈಬರ್ ಕ್ರೈಂ ಆರಂಭವಾಗಿರಬಹುದು’ ಎಂದು ಇನ್ಸ್ಪೆಕ್ಟರ್ ದಯಾನಂದ ಹೇಳಿದರು.