ಹುಬ್ಬಳ್ಳಿ : ಇಲ್ಲಿನ ಮಂಟೂರ ರಸ್ತೆಯ ಹರಿಶ್ಚಂದ್ರ ಕಾಲನಿ ಬಳಿಯ ಸ್ಮಶಾನದಲ್ಲಿ ನಿರ್ಮಿಸುತ್ತಿದ್ದ ಇಂದಿರಾ ಕ್ಯಾಂಟಿನ್ ಸ್ಥಳಾಂತರಕ್ಕೆ ಮಹಾನಗರ ಪಾಲಿಕೆ ಆಯುಕ್ತರು ಆದೇಶ ನೀಡಿದ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಹಾಗೂ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ವಿಜಯೋತ್ಸವ ಆಚರಿಸಿದರು.ಇಲ್ಲಿನ ಸ್ಟೇಶನ್ ರಸ್ತೆಯ ಅಂಬೇಡ್ಕರ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ ಕಾರ್ಯಕರ್ತರು, ಡಾ. ಬಿ.ಆರ್. ಅಂಬೇಡ್ಕರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ದೊಡ್ಡ ಗೋಲ್ಮಾಲ್: ಲೋಕಾಯುಕ್ತಕ್ಕೆ ದೂರು!
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮ ಸೇನೆಯ ಪ್ರಮೋದ ಮುತಾಲಿಕ, ಇಂದಿರಾ ಕ್ಯಾಂಟಿನ್ ತೆರವುಗೊಳಿಸುವಂತೆ ಶ್ರೀರಾಮ ಸೇನೆ ಹಾಗೂ ವಿವಿಧ ದಲಿತ ಸಂಘಟನೆಗಳು ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದರು.
ಅತಿ ಸಣ್ಣ ಪ್ರಮಾಣದಲ್ಲಿ ಪಾಲಿಕೆಯ ಜಾಗ ಅತಿಕ್ರಮಿಸಿ, ಮನೆ ಅಥವಾ ಇತರ ಕಟ್ಟಡ ಕಟ್ಟಿದರೆ ಆಯುಕ್ತರು ತಕ್ಷಣ ನೋಟಿಸ್ ಕೊಡುತ್ತಾರೆ, ಇಲ್ಲವೇ ಅತಿಕ್ರಮಣಗೊಳಿಸಿದ ಕಟ್ಟಡದ ಜಾಗ ತೆರವುಗೊಳಿಸುತ್ತಾರೆ. ಆದರೆ, ಸ್ಮಶಾನದ ಜಾಗ ಅತಿಕ್ರಮಿಸಿಕೊಂಡು ಕಟ್ಟಿದ್ದ ಇಂದಿರಾ ಕ್ಯಾಂಟಿನ್ಗೆ ಪಾಲಿಕೆ ಆಯುಕ್ತರು ಯಾವುದೇ ನೋಟಿಸ್ ನೀಡಲಿಲ್ಲ ಹಾಗೂ ಕ್ಯಾಂಟಿನ್ ಕಟ್ಟಡವನ್ನು ತೆರವುಗೊಳಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮ ಸಂಘಟನೆಯ ಹೋರಾಟದ ಫಲವಾಗಿ ಪಾಲಿಕೆ ಆಯುಕ್ತರು ಅನಿವಾರ್ಯವಾಗಿ ಇಂದಿರಾ ಕ್ಯಾಂಟಿನ್ ಬೇರೆಡೆ ಸ್ಥಳಾಂತರಕ್ಕೆ ಮುಂದಾದರು. ಈ ಪ್ರಕರಣದಲ್ಲಿ ಪಾಲಿಕೆ ಆಯುಕ್ತರದ್ದೂ ಕರ್ತವ್ಯ ಲೋಪವಾಗಿದೆ ಎಂದು ದೂರಿದರು.
ಹು-ಧಾ ಪೂರ್ವ ಕ್ಷೇತ್ರದ ಶಾಸಕರು ಉದ್ಧಟತನದಿಂದ ಕೆಲಸ ಮಾಡಬಾರದು. ಈ ರೀತಿಯ ಅತಿಕ್ರಮಣ ಬೇರೆಡೆ ಇದ್ದರೆ ಅವುಗಳನ್ನು ಪತ್ತೆ ಮಾಡಿ, ಅವುಗಳ ತೆರವಿಗೂ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಮುಖಂಡ ಚಂದ್ರಶೇಖರ ಗೋಕಾಕ ಮಾತನಾಡಿ, ಸ್ಮಶಾನದ ಜಾಗದಲ್ಲಿ ಇಂದಿರಾ ಕ್ಯಾಂಟಿನ್ ನಿರ್ವಣಕ್ಕೆ ಅನುಮತಿ ನೀಡಿದ್ದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸುತ್ತೇವೆ. ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಶ್ರೀರಾಮ ಸೇನೆಯ ಗಂಗಾಧರ ಕುಲಕರ್ಣಿ, ಮಂಜುನಾಥ ಕಾಟ್ಕರ, ಹೊನ್ನಪ್ಪ ದಿವಟಗಿ, ಬಸವರಾಜ ಗೌಡರ, ಬಸು ದುರ್ಗದ ಹಾಗೂ ಇತರರು ಹಾಜರಿದ್ದರು.