ಹುಬ್ಬಳ್ಳಿ: ‘ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಸತ್ಯ ಹೇಳಿದಾಗ ತಪ್ಪು ಮಾಡಿದವರಿಗೆ ಹೊಟ್ಟೆಯುರಿ ಆಗಿದೆ. ಕಾಂಗ್ರೆಸ್ಗೆ ಆದ ಅವಮಾನ ದಲಿತರಿಗ್ಯಾಕೆ? ದಲಿತರೆಲ್ಲ ಕಾಂಗ್ರೆಸ್ಗೆ ಸೇರಿದವರು ಎಂದು ಬರೆದುಕೊಡಲಾಗಿದೆಯೇ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಥೂ ಪಾಪಿಗಳಾ: ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಬಿತ್ತು ಕೆಚ್ಚಲಿಗೆ ಕತ್ತರಿ!
ನಗರದ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆ ಇಲ್ಲಿಯ ಇಂದಿರಾ ಗಾಜಿನಮನೆ ಆವರಣದಲ್ಲಿಂದು ಹಮ್ಮಿಕೊಂಡಿದ್ದ ‘ಸಂವಿಧಾನ ಸನ್ಮಾನ ಮತ್ತು ಪುಸ್ತಕ ಲೋಕಾರ್ಪಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸಂಸತ್ತಿನಲ್ಲಿ ಅಮಿತ್ ಶಾ ಮಾತನಾಡಿದ್ದು ಹಿಂದಿಯಲ್ಲಿ. ಆ ಭಾಷೆ ಅರ್ಥವಾಗದವರು ಬೀದಿಗೆ ಇಳಿದಿದ್ದಾರೆ. ಮೊದಲಿನಂಥ ಸಂಘಟನೆಗಳು ಈಗ ಇಲ್ಲ. ಇರುವುದೆಲ್ಲ ಹೊಟ್ಟೆಪಾಡಿನ ಸಂಘಟನೆಗಳು. ಅವರೆಲ್ಲ ಅಂಬೇಡ್ಕರ್ ಅವರ ಗುರುತಿನ ಚೀಟಿಯಷ್ಟೇ ಆಗಿದ್ದಾರೆ. ಕಾಂಗ್ರೆಸ್ ಲೂಟಿ ಮಾಡಿದ ಹಣದಲ್ಲಿ ಹೋರಾಟ ಮಾಡಬೇಕಾ? ಕೃಪಾಪೋಷಿತ ನಾಟಕ ಮಂಡಳಿಯಿಂದ ಬಂದ್ ಆಗುತ್ತಿದೆ. ಸತ್ಯದ ಅರಿವು ಆಗುವವರೆಗೆ ಹೋರಾಡುತ್ತಾರೆ. ನಂತರ ತೆಪ್ಪಗಾಗುತ್ತಾರೆ’ ಎಂದು ವ್ಯಂಗ್ಯವಾಡಿದರು.
‘ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಕೆಲವರು ನಮ್ಮ ಜಾತಿಯವರು ಎಂದು ಖುಷಿಪಡುತ್ತಾರೆ. ಇದು ಕ್ಷುಲ್ಲಕ ಸಂಗತಿ. ಎತ್ತರದ ವ್ಯಕ್ತಿಯನ್ನು ಜಾತಿಗೆ ಅಂಟಿಸದೆ, ದೇಶಕ್ಕೆ ಅಂಟಿಸಬೇಕು. ಅಂಬೇಡ್ಕರ್ ಅವರಿಗೆ ತಾವು ಯಾವ ಜಾತಿಯಲ್ಲಿ ಹುಟ್ಟುತ್ತೇನೆ ಎನ್ನುವುದು ಗೊತ್ತಿರಲಿಲ್ಲ. ನನಗೂ ಸಹ. ಗೊತ್ತಿದ್ದರೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಜಾತಿಯಲ್ಲಿ ಹುಟ್ಟುತ್ತಿದ್ದೆ. ಕಾಂಗ್ರೆಸ್ನ ಸುಳ್ಳಿನ ಹಿಂದೆ ಬೀಳುವ ಮೊದಲು ಯೋಚಿಸಬೇಕು’’ ಎಂದರು.
‘ಸಂವಿಧಾನ ಬದಲಾಯಿಸುವ ತಾಕತ್ತು ಇರುವುದು ಕಾಂಗ್ರೆಸ್ಗೆ ಮಾತ್ರ. ಉಳಿದವರ್ಯಾರಿಗೂ ಅದನ್ನು ಬದಲಿಸಲು ಸಾಧ್ಯವಿಲ್ಲ. ಸಂವಿಧಾನ ಬರೆಯಲು ಅವಕಾಶ ಸಿಕ್ಕಾಗ ಅಂಬೇಡ್ಕರ್ ಅವರು ತಮಗಾದ ಅವಮಾನ ತೀರಿಸಿಕೊಳ್ಳಬಹುದಿತ್ತು. ಅವರು ಎಲ್ಲಿಯೂ ಹಗೆತನ ಮಾಡಲಿಲ್ಲ, ಇದ್ದರೆ ಅವರಂಥ ದೇಶಭಕ್ತ ಇರಬೇಕು. ದೇಶದಲ್ಲಿ ಅತಿಹೆಚ್ಚು ವರ್ಷ ಆಡಳಿತ ನಡೆಸಿದ್ದ ಕಾಂಗ್ರೆಸ್, ಈಗ ವೋಟ್ ಬ್ಯಾಂಕ್ಗಾಗಿ ಜಾತಿ ರಾಜಕಾರಣ ಮಾಡುತ್ತಿದೆ’ ಎಂದು ಹರಿಹಾಯ್ದರು.
‘ಕಾಂಗ್ರೆಸ್ ದಲಿತರ ಪಾಲಿಗೆ ದೊಡ್ಡ ಮಾಫಿಯಾ. ಅದು ಅವರನ್ನು ಎಂದಿಗೂ ಮೇಲೆ ಬರಲು ಬಿಡುತ್ತಿಲ್ಲ. ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹಾದೇವಪ್ಪ, ಪ್ರಿಯಾಂಕ ಖರ್ಗೆ ಕುಟುಂಬದವರು ಮಾತ್ರ ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು. ಒಂದು ಬಾರಿ ಶಾಸಕರಾದವರು ಅಲ್ಲಿ ಸಚಿವರಾಗುತ್ತಾರೆ, ಮೂರು ಬಾರಿ ಶಾಸಕರಾಗಿರುವ ಪ್ರಸಾದ ಅಬ್ಬಯ್ಯ, ನರೇಂದ್ರಸ್ವಾಮಿ, ನಾರಾಯಣಸ್ವಾಮಿ ವಂಚಿತರಾಗುತ್ತಲೇ ಇರುತ್ತಾರೆ. ಅಮಾಯಕ ದಲಿತರನ್ನು ದಾರಿ ತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಕಿಡಿಕಾರಿದರು.
ಸಚಿವರಿಗೆ ಮನವಿ ಪತ್ರ: ‘₹500 ಮುಖಬೆಲೆಯ ನೋಟಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಕಬೇಕು ಎನ್ನುವುದು ಮೊದಲಿನಿಂದಲೂ ಆಗ್ರಹವಿದೆ. ಇದೇ ಏಪ್ರಿಲ್ 14ರ ಅಂಬೇಡ್ಕರ್ ಅವರ ಜನ್ಮದಿನದ ಒಳಗೆ ಆ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡಬೇಕು’ ಎಂದು ಚಲವಾದಿ ನಾರಾಯಣಸ್ವಾಮಿ ವೇದಿಕೆಯಲ್ಲಿದ್ದ ಕೇಂದ್ರ ಸಚಿವರಿಬ್ಬರಿಗೂ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ವಿಕಾಸಕುಮಾರ ಪುತ್ತೂರು ಅವರು ಬರೆದಿರುವ ‘ಸಂವಿಧಾನ ಬದಲಿಸಿದವರು ಯಾರು?’ ಪುಸ್ತಕ ಬಿಡುಗಡೆ ಮಾಡಿದರು. ಮೇಯರ್ ರಾಮಪ್ಪ ಬಡಿಗೇರ, ಶಾಸಕರಾದ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ, ಎಂ.ಆರ್. ಪಾಟೀಲ, ಎಸ್.ವಿ. ಸಂಕನೂರ, ಉಪಮೇಯರ್ ದುರ್ಗಮ್ಮ ಬಿಜವಾಡ, ಮಾಜಿ ಶಾಸಕ ಎನ್. ಮಹೇಶ, ಕೃತಿಕಾರ ವಿಕಾಸಕುಮಾರ ಪುತ್ತೂರು, ಗೋವಿಂದ ಜೋಶಿ, ಡಾ. ಕ್ರಾಂತಿ ಕಿರಣ, ಮಹೇಂದ್ರ ಕೌತಾಳ, ಪ್ರಕಾಶ ಕ್ಯಾರಕಟ್ಟಿ ಇದ್ದರು.