ಹುಬ್ಬಳ್ಳಿ : ಸುಮಾರು 11 ವರ್ಷಗಳ ನಂತರ ನಡೆಯುತ್ತಿರುವ ರೈಲ್ವೆ ಯೂನಿಯನ್ ಚುನಾವಣೆ ಹಿನ್ನೆಲೆಯಲ್ಲಿ ಡಿ. 4, 5 ಹಾಗೂ 6ರಂದು ಮತದಾನ ನಡೆಯಲಿದ್ದು, ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿ ಹೊಂದಿರುವ ನೈಋತ್ಯ ರೈಲ್ವೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.ಡಿ. 4 ಮತ್ತು 5ರಂದು ಮತದಾನ ನಾನ್ ರನ್ನಿಂಗ್ ಸ್ಟಾಫ್ ಹಾಗೂ 6ರಂದು ರನ್ನಿಂಗ್ ಸ್ಟಾಫ್ (ಲೋಕೋಪೈಲಟ್ಸ್, ಗಾರ್ಡ್ಸ್) ಮತದಾನ ಮಾಡಲಿದ್ದಾರೆ. ಬಹಿರಂಗ ಪ್ರಚಾರಕ್ಕೆ ಸೋಮವಾರವೇ ತೆರೆ ಎಳೆದಿದ್ದು, ಮತದಾರರನ್ನು ಸೆಳೆಯಲು ಅಂತಿಮ ಕಸರತ್ತು ತೆರೆಮರೆಯಲ್ಲಿ ಮುಂದುವರೆದಿದೆ.
ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ!
ಗ್ರುಪ್ ಎ, ಬಿ ಹಾಗೂ ಆರ್ಪಿಎಫ್ ಸಿಬ್ಬಂದಿಗೆ ಮತದಾನಕ್ಕೆ ಅವಕಾಶ ಇಲ್ಲ. ಇನ್ನುಳಿದಂತೆ ನೈಋತ್ಯ ರೈಲ್ವೆ ವಲಯದ 37 ಸಾವಿರಕ್ಕೂ ಹೆಚ್ಚು ನೌಕರರು ಈ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದ್ದಾರೆ. ನೈಋತ್ಯ ರೈಲ್ವೆ ವ್ಯಾಪ್ತಿಯ ಹುಬ್ಬಳ್ಳಿ ವಿಭಾಗದಲ್ಲಿ 23, ಬೆಂಗಳೂರು ವಿಭಾಗದಲ್ಲಿ 22, ಮೈಸೂರು ವಿಭಾಗದಲ್ಲಿ 19, ಹುಬ್ಬಳ್ಳಿ ವರ್ಕ್ಶಾಪ್ ನಲ್ಲಿ 4, ಮೈಸೂರು ವರ್ಕ್ ಶಾಪ್ನಲ್ಲಿ 2 ಸೇರಿ ಒಟ್ಟು 70 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಆಂದ್ರಪ್ರದೇಶದ ಹಿಂದುಪುರ, ತಮಿಳುನಾಡಿನ ಹೊಸೂರು, ಗೋವಾದ ವಾಸ್ಕೊ ಸಹ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಇದ್ದು,
ಅಲ್ಲಿನ ರೈಲ್ವೆ ನೌಕರರು ಸಹ ಮತದಾನ ಮಾಡಲಿದ್ದಾರೆ. ಕರ್ನಾಟಕದ ಕಲಬುರ್ಗಿ, ರಾಯಚೂರು, ಬೀದರ್, ಮೀರಜ್ ರೈಲ್ವೆ ನೌಕರರು ಸೌಥ್ ಸೆಂಟ್ರಲ್ ರೈಲ್ವೆ ವ್ಯಾಪ್ತಿಯಲ್ಲಿ ಬರುವುದರಿಂದ ಅವರು ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಮತದಾನ ಮಾಡುವುದಿಲ್ಲ.ಪ್ರತಿ ಐದು ವರ್ಷಕ್ಕೊಮ್ಮೆ ನಡೆಯಬೇಕಿರುವ ಚುನಾವಣೆ ಮೊದಲ ಬಾರಿಗೆ ನಡೆದಿದ್ದು 2007ರಲ್ಲಿ. 2013ರ ನಂತರ 2018ರಲ್ಲಿ ಮೂರನೇ ಬಾರಿಗೆ ಚುನಾವಣೆ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ನಡೆಯಲಿಲ್ಲ. ಇದೀಗ 11 ವರ್ಷಗಳ ನಂತರ ಮತ್ತೆ ರೈಲ್ವೆ ಯೂನಿಯನ್ ಗಳಿಗೆ ಚುನಾವಣೆ ನಡೆಯುತ್ತಿದೆ.
ಸೌಥ್ ವೆಸ್ಟರ್ನ್ ರೈಲ್ವೆ ಎಂಪ್ಲಾಯಿಸ್ ಸಂಘ, ಬಿಎಂಎಸ್ನ ನೈಋತ್ಯ ರೈಲ್ವೆ ಮದ್ದೂರ ಸಂಘ, ಸೌಥ್ ವೆಸ್ಟರ್ನ್ ಎಂಪ್ಲಾಯಿಸ್ ಯೂನಿಯನ್, ಸೌಥ್ ವೆಸ್ಟರ್ನ್ ರೈಲ್ವೆ ಮಣ್ಣೂರ ಯೂನಿಯನ್ಗಳು ಸ್ಪರ್ಧಿಸಿವೆ. ಚುನಾಯಿತ ಸಂಘಟನೆ ಕೇಂದ್ರ ಸರ್ಕಾರ ಹಾಗೂ ರೈಲ್ವೆ ಸಚಿವಾಲಯದಿಂದ ಮಾನ್ಯತೆ ಪಡೆಯಲಿದೆ. ಹೊಸ ಪಿಂಚಣಿ ವಿರೋಧಿಸಿ, ಹಳೇ ಪಿಂಚಣಿ ಜಾರಿಗೊಳಿಸುವ ಆಶ್ವಾಸನೆ ಈ ಬಾರಿಯ ರೈಲ್ವೆ ಯೂನಿಯನ್ ಚುನಾವಣೆಯಲ್ಲಿ ಮಹತ್ವ ಪಡೆದುಕೊಂಡಿದೆ.
ಮುಂದಿನ ಐದು ವರ್ಷಗಳವರೆಗೆ ರೈಲ್ವೆ ಇಲಾಖೆಯೊಂದಿಗೆ ಅಧಿಕೃತವಾಗಿ ಮಾತುಕತೆ ನಡೆಸುವ ಹಕ್ಕು ಪಡೆಯುವ ಸಂಘಟನೆ ಯಾವುದು ಎಂಬುದರ ಗುಟ್ಟು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳುವ ಡಿಸೆಂಬರ್ 12ರಂದು ಬಹಿರಂಗಗೊಳ್ಳಲಿದೆ.
ಚುನಾವಣೆ ಇತಿಹಾಸ : ನೈಋತ್ಯ ರೈಲ್ವೆ ವಲಯದಲ್ಲಿ 2007ರಲ್ಲಿ ನಡೆದ ಚುನಾವಣೆಯಲ್ಲಿ ಸೌಥ್ವೆಸ್ಟರ್ನ್ ರೈಲ್ವೆ ಮಜೂರ ಯೂನಿಯನ್ ಹಾಗೂ ಎನ್ಆರ್ಎಸ್ಎಂ ಸಂಘಟನೆಗಳು ಜಯ ಸಾಧಿಸಿದ್ದವು. 2013ರ ಚುನಾವಣೆಯಲ್ಲಿ ಐದು ಸಂಘಟನೆಗಳು ಕಣಕ್ಕೆ ಇಳಿದಿದ್ದು, ಸೌಥ್ವೆಸ್ಟರ್ನ್ ರೈಲ್ವೆ ಮಜೂರ ಯೂನಿಯನ್ ಚುನಾಯಿತಗೊಂಡಿತ್ತು. 2019ಕ್ಕೆ ಚುನಾವಣೆ ನಡೆಯದ ಕಾರಣ, ಇದೇ ಸಂಘಟನೆ ನೈಋತ್ಯ ರೈಲ್ವೆ ವಲಯದ ಆಡಳಿತದೊಂದಿಗೆ ಅಧಿಕೃತ ಮಾತುಕತೆ ನಡೆಸುವ ಹಕ್ಕನ್ನು ಮುಂದುವರೆಸಿತ್ತು.
ಶೇ. 30ರಷ್ಟು ಮತ ಪಡೆಯುವವರು ಗೆದ್ದಂತೆ : ರೈಲ್ವೆ ಯೂನಿಯನ್ ಚುನಾವಣೆಯಲ್ಲಿ ಮತ ಎಣಿಕೆ ಭಿನ್ನವಾಗಿದೆ. ಈ ಚುನಾವಣೆಯಲ್ಲಿ ಒಟ್ಟಾರೆ ಮತದಾನದ ಶೇ. 30 ಹಾಗೂ ಅದಕ್ಕಿಂತ ಹೆಚ್ಚಿನ ಮತ ಪಡೆಯುವವರು ಗೆಲುವು ಸಾಧಿಸುತ್ತಾರೆ. ಯಾವ ಸಂಘಟನೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುತ್ತಾರೋ, ಆ ಸಂಘಟನೆ ಅಧಿಕಾರ ಪಡೆಯುತ್ತದೆ. ರೈಲ್ವೆ ಸಿಬ್ಬಂದಿ ಹಾಗೂ ಸರ್ಕಾರದ ಮಧ್ಯೆ ಮಧ್ಯವರ್ತಿಯಾಗಿ ಈ ಸಂಘಟನೆ ಕಾರ್ಯನಿರ್ವಹಿಸುತ್ತದೆ. ಕಳೆದ ಬಾರಿ ಅಂದರೆ, 2013ರಲ್ಲಿ ಸೌಥ್ವೆಸ್ಟರ್ನ್ ರೈಲ್ವೆ ಮಜೂರ ಯೂನಿಯನ್ ಶೇ. 40ಕ್ಕಿಂತ ಹೆಚ್ಚು ಮತ ಪಡೆಯುವ ಮೂಲಕ ಗೆಲುವು ಸಾಧಿಸಿತ್ತು.