ಹುಬ್ಬಳ್ಳಿ: ಹಳೇಯ ದ್ವೇಷ ಹಾಗೂ ಹಣಕಾಸಿನ ವಿಷಯವಾಗಿ ಹಂದಿ ಸಾಕಾಣಿಕೆದಾರನನ್ನು ಕೊಲೆ ಮಾಡಿದ್ದ ಸಂಬಂಧಿ ಸೇರಿದಂತೆ ನಾಲ್ವರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಸುಲೇಮಾನ್ ಬಳ್ಳಾರಿ, ಮೃತನ ಅಕ್ಕನ ಗಂಡ ಟೈಟಾಸ್ ಬಾಬು ವೆನ್ನಮ್ಮ, ಮೊಹಮ್ಮದ್ ಷಾ ಫಿರೋಜಾಬಾದ್, ಮೌಲಾಸಾಬ್ ರಮಜಾನವರ ಬಂಧಿತರಾಗಿದ್ದಾರೆ.
ಇವರು ಮಂಟೂರ ರಸ್ತೆ ಮೈತ್ರಾ ಕಾಲೋನಿಯ ಸ್ಯಾಮ್ಯುಯೆಲ್ ಜಾರ್ಜ್ ಮಬ್ಬು (38) ಎಂಬಾತನನ್ನು ಶುಕ್ರವಾರ ರಾತ್ರಿ ನಗರದ ಹೊರವಲಯದ ಮಂಟೂರ ರಸ್ತೆ ರಿಂಗ್ ರೋಡ್ ಬಳಿ ರಾಡ್, ಕಟ್ಟಿಗೆಯಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದರು. ಬೆಂಡಿಗೇರಿ ಠಾಣೆಯಲ್ಲಿ ಏಂಜಲ್ ಎಂಬುವರು ಪ್ರಕರಣ ದಾಖಲಿಸಿದ್ದರು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ರವಿವಾರ (ಡಿ.29) ಸುದ್ದಿಗಾರರಿಗೆ ತಿಳಿಸಿದರು.
ಕೊಲೆಗೆ ಹಣಕಾಸಿನ ವ್ಯವಹಾರ ಮತ್ತು ಕೌಟುಂಬಿಕ ಕಲಹವೆ ಕಾರಣವೆಂದು ವಿಚಾರಣೆ ವೇಳೆ ತಿಳಿದು ಬಂದಿದ್ದು, ತನಿಖೆ ಮುಂದುವರಿಸಲಾಗಿದೆ. ಪ್ರಕರಣ ದಾಖಲಾದ 48 ಗಂಟೆಯೊಳಗೆ ಠಾಣೆಯ ಇನ್ಸಪೆಕ್ಟರ್ ಎಸ್.ಆರ್. ನಾಯಕ ಮತ್ತು ತಂಡವು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿಸಿದರು.