ಹುಬ್ಬಳ್ಳಿ: ಇಲ್ಲಿನ ವಿಶ್ವೇಶ್ವರ ನಗರದ ಶಾಂತಿ ಕಾಲೊನಿಯ ಮನೆಯೊಂದರ ಮಾಲೀಕರನ್ನು ಹಾಗೂ ವಾಚ್ಮ್ಯಾನ್ ಅನ್ನು ಕಟ್ಟಿಹಾಕಿ, ಚಿನ್ನಾಭರಣ ಕಳವು ಮಾಡಿದ ಪ್ರಕರಣ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ನಂತರ ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಲಾಗಿದೆ.
ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದ ಆರು ಮಂದಿ ದರೋಡೆಕೋರರು, ಮನೆಯ ಹಿಂದಿನ ಗೇಟ್ ಅನ್ನು ತುಂಡು ಮಾಡಿ ಒಳಗೆ ಬಂದಿದ್ದಾರೆ. ವಾಚ್ಮ್ಯಾನ್ ಕುಮಾರಯ್ಯ ಹಿರೇಮಠ ಅವರಿಗೆ ಚಾಕು ತೋರಿಸಿ ಬೆದರಿಸಿ, ಬಾಯಿ, ಕೈ–ಕಾಲು ಕಟ್ಟಿ ಗಿಡದ ಗಂಟಿಯಲ್ಲಿ ಎಸೆದಿದ್ದಾರೆ. ನಂತರ, ಮನೆ ಬಾಗಿಲು ಮುರಿದು ಒಳಗೆ ಮಲಗಿದ್ದ ಮಾಲೀಕ ವಿಜಯಕುಮಾರ್ ಮತ್ತು ಅವರ ಪತ್ನಿಗೆ ಚಾಕು ತೋರಿಸಿ, ಹಲ್ಲೆ ಮಾಡಿ ಅವರಿಂದಲೇ ಅಲ್ಮೇರಾ ಕೀ ಪಡೆದು, ಅವರನ್ನು ಸಹ ಕಟ್ಟಿಹಾಕಿ ₹1.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ.
ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಡಿಸಿಪಿ ಮಹಾನಿಂಗ ನಂದಗಾವಿ ಸೇರಿದಂತೆ ಇತರ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮನೆಯವರಿಂದ ಮಾಹಿತಿ ಪಡೆದಿದ್ದಾರೆ. ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಮಾದರಿ ಸಂಗ್ರಹಿಸಿದ್ದಾರೆ.
‘ವಿಜಯಕುಮಾರ್ ದಂಪತಿ ಮಗ ಸಚಿನ್ ಅವರು ಬೆಳಿಗ್ಗೆ ಮೇಲ್ಮಹಡಿಯಿಂದ ಕೆಳಗೆ ಬಂದಾಗ, ಕೋಣೆಯೊಂದರಲ್ಲಿ ತಂದೆ- ತಾಯಿಯನ್ನು ಕುರ್ಚಿಗೆ ಕಟ್ಟಿಹಾಕಿದ್ದು ನೋಡಿದ್ದಾರೆ.
ದೀಪ ಯಾವ ತರ ಬೆಳಗುತ್ತವೆಯೋ ಅದೇ ತರ ನಿಮ್ಮ ಮಕ್ಕಳ ಬಾಳು ಬೆಳಗಲಿ- ವಾಲಿ ಶ್ರೀ
ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ದರೋಡೆಕೋರರ ಚಲನವಲನದ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮನೆ ಸುತ್ತ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಹಾಗೂ ಮನೆಗಳ ಎದುರು ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಡಿಸಿಪಿ ಮಹಾನಿಂಗ ನಂದಗಾವಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು.
‘ಈ ಹಿಂದೆಯೂ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹದ್ದೇ ಎರಡು ಪ್ರಕರಣಗಳು ದಾಖಲಾಗಿದ್ದವು. ತನಿಖೆ ನಡೆಸಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಮೂಲದ ದರೋಡೆಕೋರರನ್ನು ಬಂಧಿಸಲಾಗಿತ್ತು’ ಎಂದು ತಿಳಿಸಿದರು.