ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣ ಪುರಸಭೆಯ 10ನೇ ಅವಧಿಯ ಅಧ್ಯಕ್ಷ ಸ್ಥಾನವನ್ನು ‘ಪರಿಶಿಷ್ಠ ಪಂಗಡ’ ಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ‘ಅ’ ಪ್ರವರ್ಗಕ್ಕೆ ಮೀಸಲಾತಿ ನಿಗದಿಗೊಳಿಸಿ ನಗರಾಭಿವೃದ್ದಿ ಇಲಾಖೆ ಅಧೀನ ಕಾರ್ಯದರ್ಶಿ ಟಿ.ಮಂಜುನಾಥ ಆದೇಶ ಹೊರಡಿಸಿದ್ದಾರೆ.
ಈ ಮೊದಲು ನಗರಾಭಿವೃದ್ದಿ ಇಲಾಖೆಯು ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಠ ಪಂಗಡದ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಹಿಂದುಳಿದ ಅ ವರ್ಗಕ್ಕೆ ಮೀಸಲಾತಿ ನಿಗದಿಪಡಿಸಿತ್ತು. ಆದರೆ ಸ್ಥಳೀಯ ಪುರಸಭೆಯಲ್ಲಿ ಪರಿಶಿಷ್ಠ ಪಂಗಡಕ್ಕೆ ಸೇರಿದ ಮಹಿಳಾ ಸದಸ್ಯರು ಇರದೇ ಇದ್ದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸ್ಥಗಿತವಾಗಿತ್ತು.
‘ಪರಿಶಿಷ್ಠ ಪಂಗಡ’ದ ಮಹಿಳೆಗೆ ನೀಡಿದ ಮೀಸಲಾತಿಯನ್ನು ತಿದ್ದುಪಡಿ ಮಾಡಿ ಪರಿಶಿಷ್ಠ ಪಂಗಡದ ಪುರುಷನಿಗೆ ಮೀಸಲಾತಿಯನ್ನು ನೀಡುವಂತೆ ಆಗ್ರಹಿಸಿ ವಾರ್ಡ್ ನಂಬರ್ 16 ರ ಸದಸ್ಯ ಶಿವಾನಂದ ಬೆಳಹಾರ ನ್ಯಾಯಾಲಯದ ಮೊರೆ ಹೋಗಿದ್ದರು.
ಅಣ್ಣಿಗೇರಿ ಪುರಸಭೆ ಒಟ್ಟು 23 ಸದಸ್ಯರನ್ನು ಒಳಗೊಂಡಿದೆ. ಕಾಂಗ್ರೆಸ್-13. ಬಿಜೆಪಿ-4 ಹಾಗೂ ಪಕ್ಷೇತರರಾಗಿ-6 ಸದಸ್ಯರು ಇದ್ದಾರೆ. ಇದರಲ್ಲಿ ಪಕ್ಷೇತರ ಓರ್ವ ಸದಸ್ಯ ಶಿವಾನಂದ ಬೆಳಹಾರ ಮಾತ್ರ ಪರಿಶಿಷ್ಠ ಪಂಗಡಕ್ಕೆ ಸೇರಿದ್ದರಿಂದ ಬಹುತೇಕ ಅಧ್ಯಕ್ಷ ಪಟ್ಟ ಲಭಿಸಲಿದೆ ಎಂದು ಮೂಲಗಳು ತಿಳಿಸಿವೆ.
‘ಶೀಘ್ರದಲ್ಲೇ ಸ್ಥಳೀಯ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಚುನಾವಣಾ ಮಾರ್ಗಸೂಚಿಸಿಗಳನ್ನು ಹೊರಡಿಸಲಾಗುವುದು‘ ಎಂದು ತಹಶೀಲ್ದಾರ್ ಮಂಜುನಾಥ ದಾಸಪ್ಪನವರ ಹೇಳಿದರು.