ಬೆಂಗಳೂರು: ಪ್ರತಿಯೊಬ್ಬರಿಗೂ ಜೀವನದಲ್ಲಿ ಆರ್ಥಿಕ ಗುರಿಗಳಿರುತ್ತವೆ. ಮದುವೆ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಹೀಗೆ ಹಲವು ಅಗತ್ಯಗಳಿಗಾಗಿ ಹಣ ಉಳಿಸುತ್ತಾರೆ. ಆದರೆ ಅನೇಕ ಜನರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಣವನ್ನು ಉಳಿಸಲು ಆಸಕ್ತಿ ಹೊಂದಿರುವುದಿಲ್ಲ. ಯುವ ವೃತ್ತಿಪರರು ಹೆಚ್ಚಾಗಿ ತಮ್ಮ 30 ಅಥವಾ 40 ವರ್ಷಗಳವರೆಗೆ ಜೀವನವನ್ನು ಆನಂದಿಸಲು ಬಯಸುತ್ತಾರೆ. ನಂತರ ಉಳಿತಾಯಕ್ಕಾಗಿ ಯೋಜಿಸುತ್ತಾರೆ. ಹೀಗೆ ಯೋಚಿಸುವುದರಿಂದ ಅನೇಕ ಪ್ರಯೋಜನಗಳು ನಷ್ಟವಾಗುತ್ತವೆ.
ಆದರೆ ನೆನಪಿಡಿ ಸಂಬಳ ಎಷ್ಟೇ ಬರಲಿ ಅದರಲ್ಲಿ ಪ್ರತಿ ತಿಂಗಳು ಒಂದಷ್ಟು ಹಣವನ್ನು ಉಳಿತಾಯ ಮಾಡಲೇ ಬೇಕು. ಯಾವಾಗ, ಯಾವ ರೀತಿಯಲ್ಲಿ ಅಪಾಯ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಹೀಗಾಗಿ ಸಂಬಳ ಕೈಗೆ ಸಿಗಲು ಆರಂಭಿಸಿದ ದಿನದಿಂದ ಕಡ್ಡಾಯವಾಗಿ ಒಂದಷ್ಟು ಮೊತ್ತ ಉಳಿತಾಯ ಮಾಡಿ ಎಂದು ಆರ್ಥಿಕ ತಜ್ಞರು ಸಲಹೆ ನೀಡುತ್ತಾರೆ. ಕೈಗೆ ಸಿಗುವುದೇ ಇಷ್ಟು ಸಣ್ಣ ಮೊತ್ತ. ಇದರಲ್ಲಿ ಉಳಿತಾಯ ಮಾಡುವುದಾದರೂ ಹೇಗೆ? ಎನ್ನುವುದು ಬಹುತೇಕರ ಪ್ರಶ್ನೆ. ಅದಕ್ಕೆ ಇಲ್ಲಿದೆ ಉತ್ತರ.
ಬಜೆಟ್ ತಯಾರಿಸಿ
ಮೊದಲಿಗೆ ಬಜೆಟ್ ತಯಾರಿಸಿಕೊಳ್ಳಿ. ಕೈಗೆ ಎಷ್ಟು ಸಂಬಳ ಬರುತ್ತದೆ ಎನ್ನುವುದನ್ನು ಗಮನಿಸಿ ಬಜೆಟ್ ತಯಾರಿಸಿ. ತಿಂಗಳ ಆರಂಭದಲ್ಲೇ ಸಂಬಳದ ಮೊತ್ತವನ್ನು ಪ್ರತಿ ಖರ್ಚಿಗೆ ಇಷ್ಟೆಂದು ನಿರ್ಧರಿಸಿ. ಇದರಿಂದ ಅನಗತ್ಯ ಖರ್ಚನ್ನು ತಪ್ಪಿಸಬಹುದು. ಇದೇ ಕಾರಣಕ್ಕೆ ರಾಜ್ಯ, ಕೇಂದ್ರ ಸರ್ಕಾರಗಳು ಬಜೆಟ್ಗೆ ಒತ್ತು ನೀಡುತ್ತವೆ.
ಎಮರ್ಜೆನ್ಸಿ ಫಂಡ್
ಜೀವನ ಎನ್ನುವುದು ಅನಿರೀಕ್ಷಿತಗಳ ಆಗರ. ಇಲ್ಲಿ ಯಾವಾಗ, ಏನು ಸಂಭವಿಸುತ್ತದೆ ಎನ್ನುವುದನ್ನು ಮೊದಲೇ ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ ಎಮರ್ಜೆನ್ಸಿ ಫಂಡ್ ಹೊಂದಿರುವುದು ಅತ್ಯಗತ್ಯ. ಅಂದರೆ 4-5 ತಿಂಗಳ ಸಂಬಳದಷ್ಟು ಹಣ ನಮ್ಮ ಸೇವಿಂಗ್ ಅಕೌಂಟ್ನಲ್ಲಿ ಯಾವತ್ತೂ ಇರಬೇಕು. ಅನಿರೀಕ್ಷಿತ ಅಗತ್ಯಗಳಿಗೆ ಇದು ನೆರವಾಗುತ್ತದೆ. ತಕ್ಷಣ ದುಡ್ಡು ಕೈಗೆ ಬರುವಂತಿರಬೇಕು. ಇದರಿಂದ ಕಷ್ಟ ಕಾಲದಲ್ಲಿ ಸಾಲಕ್ಕಾಗಿ ಇತರರ ಮುಂದೆ ಕೈ ಚಾಚುವುದು ತಪ್ಪುತ್ತದೆ.
ಸಾಧ್ಯವಿರುವಲ್ಲೆಲ್ಲ ಖರ್ಚು ಕಡಿಮೆ ಮಾಡಿ
ನಿಮ್ಮ ಸಂಬಳವನ್ನು ಉಳಿಸಲು ಇದೊಂದು ಅತ್ಯುತ್ತಮ ಮಾರ್ಗ. ಸಾಧ್ಯವಾದಷ್ಟು ಮನೆಯಲ್ಲೇ ಆಹಾರ ತಯಾರಿಸಿ. ಪ್ರತಿ ದಿನ ಹೋಟೆಲ್ ಆಹಾರ ಸೇವಿಸುವುದರಿಂದ ಖರ್ಚು ಅಧಿಕ. ಮಾತ್ರವಲ್ಲ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇನ್ನು ಆದಷ್ಟು ಕರೆಂಟ್ ಉಳಿತಾಯ ಮಾಡಿ. ಅನಗತ್ಯ ಬಳಕೆ ತಪ್ಪಿಸಿ. ಮನೆ ಸಮೀಪದಲ್ಲೇ ಆಫೀಸ್ ಇದ್ದರೆ ಆದಷ್ಟು ನಡೆದುಕೊಂಡೇ ಹೋಗಿ. ಇದರಿಂದ ವಾಕಿಂಗ್ ಮಾಡಿದಂತೂ ಆಗುತ್ತದೆ. ಇನ್ನು ಅಗತ್ಯ ವಸ್ತುಗಳನ್ನು ಆನ್ಲೈನ್ / ಆಫ್ಲೈನ್ನಲ್ಲಿ ಆಫರ್ ಇದ್ದಾಗ ಕಂಡುಕೊಳ್ಳಿ.
ವಿಮೆ ಮಾಡಿಸಿ
ಜೀವ ವಿಮೆ ಮತ್ತು ಆರೋಗ್ಯ ವಿಮೆ ಮಾಡಿಸಿಲ್ಲ ಎಂದಾದರೆ ಮೊದಲು ಇದನ್ನು ಮಾಡಿಸಿ. ಇದು ಅನಿವಾರ್ಯವೂ ಹೌದು. ಆರೋಗ್ಯ ವಿಮೆ ಕಠಿಣ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುತ್ತದೆ. ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಈ ವಿಮೆ ವ್ಯಾಪ್ತಿಗೆ ಒಳಪಡುತ್ತಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಜತೆಗೆ ಜೀವ ವಿಮೆಯೂ ಪ್ರಮುಖವಾದುದು. ನಿಮ್ಮ ಜೀವ ವಿಮಾ ರಕ್ಷಣೆಯು ವಾರ್ಷಿಕ ಮನೆಯ ವೆಚ್ಚಗಳ ಮೂರು ಪಟ್ಟು ಇರುವಂತೆ ನೋಡಿಕೊಳ್ಳಿ. ಇದರಿಂದ ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಅಕೌಂಟ್ನಲ್ಲಿರುವ ಹಣವನ್ನು ಹಾಗೇ ಉಳಿಸಬಹುದು.
ಕಂಡದ್ದೆಲ್ಲ ಕೊಂಡು ಗುಡ್ಡೆ ಹಾಕಬೇಡಿ
ಶಾಪಿಂಗ್ ಹೋದಾಗ ಅಥವಾ ಆನ್ಲೈನ್ನಲ್ಲಿ ಆಕರ್ಷಕವಾಗಿ ಕಂಡದ್ದನ್ನೆಲ್ಲ ಕೊಂಡುಕೊಳ್ಳುವ ಅಭ್ಯಾಸ ಕೆಲವರಿಗಿರುತ್ತದೆ. ಅದರ ಉಪಯೋಗವೇನು, ತಾವೆಷ್ಟು ಅದನ್ನು ಬಳಸುತ್ತೇವೆ ಎನ್ನುವ ಬಗ್ಗೆ ಯೋಚನೆಯನ್ನೂ ಮಾಡದೆ ಖರೀದಿಸಿ ಗುಡ್ಡೆ ಹಾಕುತ್ತಾರೆ. ಈ ಅಭ್ಯಾಸವನ್ನು ನಿಲ್ಲಿಸಿ. ಯಾವುದೇ ವಸ್ತು ಕಂಡುಕೊಳ್ಳಬೇಕಾದರೆ ನಿಜವಾಗಿಯೂ ಅಗತ್ಯ ಉಂಟಾ ಎನ್ನುವುದನ್ನು ಹಲವು ಬಾರಿ ಯೋಚಿಸಿ.
ಹೂಡಿಕೆ ಮಾಡಿ
ಇಂದಿನ ಉಳಿತಾಯವೇ ನಾಳೆಯ ಆದಾಯ. ಹೀಗಾಗಿ ನಿಮ್ಮ ಆದಾಯದ 10% ಅನ್ನು ಹೂಡಿಕೆ ಮಾಡಿ. ಆದರೆ ಎಲ್ಲವನ್ನೂ ಒಂದೇ ಕಡೆ ಹೂಡಿಕೆ ಮಾಡಬೇಡಿ. ಇದಕ್ಕಾಗಿ ಈಕ್ವಿಟಿ, ಚಿನ್ನ, ಮ್ಯೂಚುವಲ್ ಫಂಡ್ನಂತಹ ವೈವಿಧ್ಯಮಯ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಿ. ಮ್ಯೂಚುವಲ್ ಫಂಡ್ ಎಂದರೆ ಸಾಮೂಹಿಕ ಹೂಡಿಕೆಯ ಸಾಧನ. ಹಲವಾರು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ವೃತ್ತಿಪರ ಫಂಡ್ ಮ್ಯಾನೇಜರ್ಗಳ ನೆರವಿನಿಂದ ಈಕ್ವಿಟಿ, ಬಾಂಡ್, ಸರ್ಕಾರಿ ಸೆಕ್ಯುರಿಟೀಸ್,
ಮನಿ ಮಾರ್ಕೆಟ್ ಸಾಧನಗಳಲ್ಲಿ ಹೂಡಿಕೆ ಮಾಡುವುದು. ಪ್ರತಿ ಮ್ಯೂಚುವಲ್ ಫಂಡ್ ಯೋಜನೆಗೂ ಅದರದ್ದೇ ಆದ ಉದ್ದೇಶ ಇರುತ್ತದೆ. ಸ್ಟಾಕ್ ಮಾರ್ಕೆಟ್ ಬಗ್ಗೆ ಸಾಕಷ್ಟು ತಿಳುವಳಿಕೆ ಇಲ್ಲದವರು ಹಾಗೂ ತಿಳಿಯಲು ಸಮಯದ ಅಭಾವ ಇರುವವರು ಮ್ಯೂಚುವಲ್ ಫಂಡ್ ಆಯ್ಕೆ ಮಾಡಬಹುದು. ನೆನಪಿಡಿ ಹೂಡಿಕೆಯಲ್ಲಿ ತೊಡಗುವ ಮುನ್ನ ಹಣಕಾಸು ಸಲಹೆಗಾರರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಇಎಂಐ ತಪ್ಪಿಸಬೇಡಿ
ದಂಡದ ಮೂಲಕ ನಿಮ್ಮ ಒಂದಷ್ಟು ಹಣ ಪೋಲಾಗುವುದನ್ನು ತಡೆಯುವ ಅತ್ಯುತ್ತಮ ಮಾರ್ಗ ಎಂದರೆ ಸರಿಯಾದ ಸಮಯಕ್ಕೆ ಇಎಂಐ ಪಾವತಿಸುವುದು. ಸರಿಯಾಗಿ ಇಎಂಐ ಪಾವತಿಸದಿದ್ದರೆ ದಂಡ ವಿಧಿಸಲಾಗುತ್ತದೆ. ಇದರಿಂದ ನಿಮ್ಮ ಹಣ ವ್ಯರ್ಥವಾದಂತಾಗುತ್ತದೆ. ಅಲ್ಲದೆ ವಾಹನದಲ್ಲಿ ಸಂಚರಿಸುವಾಗ ದಾಖಲೆಗಳು ತಪ್ಪದೆ ನಿಮ್ಮ ಬಳಿ ಇರಲಿ. ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸುವುದು ಮುಂತಾದ ನಿಯಮಗಳನ್ನು ಉಲ್ಲಂಘಿಸಲೇಬೇಡಿ.