ಇವತ್ತು ಭಾನುವಾರ. ಈ ದಿನ ಬೆಳಿಗ್ಗೆ ತಿಂಡಿ ಮಾಡುವವರಿಗಿಂತ ನೇರವಾಗಿ ಮಧ್ಯಾಹ್ನದ ಊಟ ಮಾಡುವವರೇ ಹೆಚ್ಚು. ಅದರಲ್ಲೂ ವೀಕೆಂಡ್ನಲ್ಲಿ ಮಾಂಸಾಹಾರವನ್ನು ಸೇವಿಸಲು ಹೆಚ್ಚು ಜನ ಇಷ್ಟಪಡುತ್ತಾರೆ. ಅಡುಗೆ ಮಾಡುವುದು ತಡವಾದರೂ ಪರವಾಗಿಲ್ಲ, ಚಿಕನ್ ಅಡುಗೆ ಮಾಡಿ ಸವಿದ್ರೆ ಎಷ್ಟು ಟೇಸ್ಟಿಯಾಗಿರುತ್ತೆ. ಆಂಧ್ರ ಸ್ಟೈಲ್ ಚಿಕನ್ ಫ್ರೈ ಮಾಡಿ ತಿನ್ನಿ. ಇದು ಹೊಸ ರುಚಿ ನೀಡುವುದರ ಜೊತೆಗೆ ನಿಮ್ಮ ಹಬ್ಬದ ಕಳೆ ಮತ್ತಷ್ಟು ಹೆಚ್ಚಿಸುತ್ತದೆ. ಇದನ್ನು ಕುರುಕುಲು ರೊಟ್ಟಿ, ರೋಟಿ ನಾನ್ ಅಥವಾ ಅನ್ನದೊಂದಿಗೆ ತಿಂದರೆ ಸಖತ್ ಟೇಸ್ಟಿಯಾಗಿರುತ್ತದೆ.
ಚಿಕನ್ ಫ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು
- ಚಿಕನ್ – 1 ಕೆಜಿ
- ಉಪ್ಪು – 1 ಚಮಚ
- ಅರಿಶಿನ ಪುಡಿ – 1/2 ಚಮಚ
- ಮೆಣಸಿನ ಪುಡಿ – 4 ಟೇಬಲ್ ಸ್ಪೂನ್
- ಧನಿಯಾ – 1 1/2 ಟೀಸ್ಪೂನ್
- ಜೀರಿಗೆ – 1 ಚಮಚ
- ಸೋಂಪು – 1 ಚಮಚ
- ಮೆಣಸು – 1 ಚಮಚ
- ಏಲಕ್ಕಿ – 3
- ಲವಂಗ – 4
- ಚಕ್ಕೆ- 2
- ಒಣ ಮೆಣಸಿನಕಾಯಿ – 6
- ಕಾಶ್ಮೀರಿ ಮೆಣಸಿನಕಾಯಿ – 4
- ಎಣ್ಣೆ – 4 ಟೀಸ್ಪೂನ್
- ಸಣ್ಣದಾಗಿ ಕತ್ತರಿಸಿದ ಈರುಳ್ಳಿ – 4
- ಸಣ್ಣದಾಗಿ ಕತ್ತರಿಸಿದ ಹಸಿರು ಮೆಣಸಿನಕಾಯಿ – 2
- ಕರಿಬೇವಿನ ಎಲೆಗಳು – ಸ್ವಲ್ಪ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ – 2 ಚಮಚ
- ಉಪ್ಪು – ಅಗತ್ಯಕ್ಕೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು – ಸ್ವಲ್ಪ
ಚಿಕನ್ ಫ್ರೈ ಮಾಡುವ ವಿಧಾನ
- ಮೊದಲು ಚಿಕನ್ ಗೆ ಉಪ್ಪು, ಅರಿಶಿನ ಪುಡಿ ಮತ್ತು ಮೆಣಸಿನ ಪುಡಿ ಸೇರಿಸಿ ಮತ್ತು 15 ನಿಮಿಷಗಳ ಕಾಲ ನೆನೆಸಿ.
- ಬಳಿಕ ಧನಿಯಾ, ಜೀರಿಗೆ, ಸೋಂಪು ಕಾಳು, ಮೆಣಸು, ಏಲಕ್ಕಿ, ಲವಂಗ, ತೊಗಟೆ, ಒಣ ಮೆಣಸಿನಕಾಯಿ ಮತ್ತು ಕಾಶ್ಮೀರಿ ಮೆಣಸಿನಕಾಯಿಯನ್ನು ಬಾಣಲೆಗೆ ಹಾಕಿ, ಅವುಗಳನ್ನು ಚೆನ್ನಾಗಿ ಹುರಿಯಿರಿ. ನಂತರ ಅದನ್ನು ಚೆನ್ನಾಗಿ ತಣ್ಣಗಾಗಿಸಿ ಪುಡಿ ಮಾಡಿ.
- ಈಗ ಬಾಣಲೆಯಲ್ಲಿ ಎಣ್ಣೆ ಹಾಕಿ ಮತ್ತು ಕತ್ತರಿಸಿದ ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ. ಈರುಳ್ಳಿ ಗೋಲ್ಡನ್ ಬ್ರೌವ್ನ್ ಕಲರ್ ಬರುವವರೆಗೆ ಚೆನ್ನಾಗಿ ಹುರಿಯಿರಿ
- ಬಳಿಕ ಕರಿಬೇವಿನ ಸೊಪ್ಪು ಮತ್ತು ನೆನೆಸಿದ ಚಿಕನ್ ಹಾಕಿ ಮಿಕ್ಸ್ ಮಾಡಿ.
- ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 5 ನಿಮಿಷ ಹುರಿಯಿರಿ. ಕೊನೆಗೆ ರುಬ್ಬಿದ ಮಸಾಲಾ ಪುಡಿಯನ್ನು ಸೇರಿಸಿ, 5 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.
- ನಂತರ ಉಳಿದ ಮಸಾಲೆ ಪುಡಿಯನ್ನು ಸೇರಿಸಿ ಮತ್ತೆ ಮಿಕ್ಸ್ ಮಾಡಿ. ನಂತರ ಉಪ್ಪು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ 10 ನಿಮಿಷ ಬೇಯಿಸಿ.
- ಕೊನೆಯಲ್ಲಿ ಚಿಕನ್ ಫ್ರೈ ಮೇಲೆ ಕರಿಬೇವಿನ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿದರೆ ಆಂಧ್ರ ಸ್ಟೈಲ್ ಚಿಕನ್ ಫ್ರೈ ಸವಿಯಲು ರೆಡಿ.