ಲಖನೌ:- ಇತ್ತೀಚೆಗೆ ಕೆಲವರು ಹಣಕ್ಕಾಗಿ ಯಾವುದೇ ರೀತಿಯ ಕೃತ್ಯಕ್ಕೂ ಇಳಿಯುತ್ತಿದ್ದಾರೆ. ಅದರಂತೆ ಇಲ್ಲೊಬ್ಬ ಮಹಿಳೆ ಹಣಕ್ಕಾಗಿ ಆಘಾತಕಾರಿ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇದು ಇಡೀ ಸಮಾಜವನ್ನು ಯೋಚಿಸುವಂತೆ ಮಾಡಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ಸಾಮೂಹಿಕ ವಿವಾಹ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ ಇಲ್ಲೊಬ್ಬ ಮಹಿಳೆ ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳಲು ಆಘಾತಕಾರಿ ನಡೆ ಅನುಸರಿಸುವ ಮೂಲಕ ಭಾರಿ ಸುದ್ದಿಯಾಗಿದ್ದಾಳೆ. ಈಗಾಗಲೇ ಮದುವೆಯಾಗಿದ್ದರೂ ಹಣಕ್ಕಾಗಿ ಸ್ವಂತ ಅಣ್ಣನನ್ನೇ ಮರುಮದುವೆ ಮಾಡಿಕೊಂಡಿದ್ದಾಳೆ. ಈ ಸುದ್ದಿ ಸ್ಥಳೀಯವಾಗಿ ಭಾರೀ ಸಂಚಲನ ಮೂಡಿಸಿದೆ.
ಈ ಯೋಜನೆಯಡಿ ಮದುವೆಯಾಗುವ ದಂಪತಿಗೆ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು 35 ಸಾವಿರ ರೂ. ಆರ್ಥಿಕ ಸಹಾಯ ಮಾಡಲಾಗುತ್ತದೆ. ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಬಡ ಜನರ ಅನುಕೂಲಕ್ಕೆ ಇಂಥದ್ದೊಂದು ಯೋಜನೆಯನ್ನು ಜಾರಿಗೆ ತಂದಿದ್ದರೆ, ಇತ್ತೀಚೆಗೆ ಈ ಯೋಜನೆಯಲ್ಲಿ ಕೆಲವು ಅವ್ಯವಹಾರಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಈ ತಿಂಗಳ ಮಾರ್ಚ್ 5ರಂದು ಮಹಾರಾಜಗಂಜ್ನ ಲಕ್ಷ್ಮೀಪುರ ಬ್ಲಾಕ್ನಲ್ಲಿ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆಯಡಿ 38 ಜೋಡಿಗಳು ವಿವಾಹವಾದರು. ಈ ಯೋಜನೆಯ ಲಾಭ ಪಡೆಯಲು ಕೆಲವರು ಎರಡನೇ ಮದುವೆಯಾಗಲು ಸಹ ನಿರ್ಧರಿಸಿದ್ದಾರೆ. ಅದೇ ಮಹಿಳೆಯೊಬ್ಬಳು ಸಾಮೂಹಿಕ ವಿವಾಹಕ್ಕೆ ನೋಂದಣಿ ಮಾಡಿಕೊಂಡಿದ್ದಳು. ಕೆಲ ಮಧ್ಯವರ್ತಿಗಳು ಮಹಿಳೆಯನ್ನು ಪುಸಲಾಯಿಸಿ, ಮದುವೆ ಒಪ್ಪಿಸಿ, ಆಕೆಯ ಸಹೋದರನೊಂದಿಗೆ ಮದುವೆ ಮಾಡಲು ನಿರ್ಧರಿಸಿದರು. ಮದುವೆ ದಿನ ಇಬ್ಬರು ಶಾಸ್ತ್ರೋಕ್ತವಾಗಿ ಮದುವೆಯಾದರು. ಸಪ್ತಪದಿ ಸಹ ತುಳಿದರು. ಉಡುಗೊರೆಗಳನ್ನು ಸಹ ಸ್ವೀಕಾರ ಮಾಡಿದರು.
ಆದರೆ, ಮಹಿಳೆ ಹಣಕ್ಕಾಗಿ ತನ್ನ ಸಹೋದರನ ಜತೆ ಮದುವೆಯಾಗಿ ಸರ್ಕಾರಕ್ಕೆ ವಂಚನೆ ಮಾಡಿದ್ದಾಳೆ ಎಂಬ ವಿಷಯ ಹೊರಬೀಳುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಮಹಿಳೆ ವಿರುದ್ಧ ಕ್ರಮ ಜರುಗಿಸಿದ್ದಾರೆ. ಮಹಾರಾಜ್ ಗಂಜ್ನ ಪ್ರದೇಶಾಭಿವೃದ್ಧಿ ಅಧಿಕಾರಿ, ಮಹಿಳೆಗೆ ನೀಡಿರುವ ಉಡುಗೊರೆ ಮತ್ತು ಹಣವನ್ನು ವಸೂಲಿ ಮಾಡಿ, ಕೂಡಲೇ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.