ವಾಷಿಂಗ್ಟನ್:- ಚೀನಾ, ಮೆಕ್ಸಿಕೋ, ಕೆನಡಾ ಬೆನ್ನಲ್ಲೇ ಏ. 2ರಿಂದ ಭಾರತದ ಮೇಲೂ ಪ್ರತಿ ಸುಂಕ ಹಾಕುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನಕ್ಕೆ ಹಿಂದಿರುಗಿದ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಜಂಟಿ ಅಧಿವೇಶನದಲ್ಲಿ ಮಾತನಾಡಿದರು. ಈ ವೇಳೆ ತಮ್ಮ ಎರಡನೇ ಅಧಿಕಾರ ಅವಧಿಯ ಸಂಪೂರ್ಣ ಯೋಜನೆಗಳ ನೋಟವನ್ನು ಪ್ರಸ್ತುತಪಡಿಸಿದರು. ಅಮೆರಿಕದ ನಾಗರಿಕರ ಆರ್ಥಿಕತೆ, ಭದ್ರತೆ ಮತ್ತು ಜಾಗತಿಕ ಸಹಕಾರ ಬಲಪಡಿಸುವ ಬದ್ಧತೆ ಬಗ್ಗೆ ಟ್ರಂಪ್ ಮಾತನಾಡಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಟ್ಯಾರಿಫ್ ನೀತಿಯನ್ನು ಶತಾಯಗತಾಯ ಜಾರಿಗೆ ತರಲು ಸಂಕಲ್ಪ ತೊಟ್ಟಂತಿದ್ದಾರೆ. ಈವರೆಗೂ ಅವರು ತಾವು ಹೇಳಿದಂತೆಯೇ ಮಾಡುತ್ತಿದ್ದಾರೆ. ಕೆನಡಾ, ಮೆಕ್ಸಿಕೋ ಮತ್ತು ಚೀನಾ ಮೇಲೆ ಸುಂಕ ವಿಧಿಸಿದ್ದಾರೆ. ಭಾರತ, ಐರೋಪ್ಯ ಒಕ್ಕೂಟ ಹಾಗೂ ಇತರ ದೇಶಗಳ ಮೇಲೂ ಟ್ಯಾರಿಫ್ ಹಾಕುವುದಾಗಿ ಹೇಳಿದ್ದಾರೆ. ಭಾರತ ಹಾಗೂ ಇತರ ದೇಶಗಳ ಮೇಲೆ ಏಪ್ರಿಲ್ 2ರಿಂದ ರೆಸಿಪ್ರೋಕಲ್ ಟ್ಯಾಕ್ಸ್ ಅಥವಾ ಪ್ರತಿ ಸುಂಕ ವಿಧಿಸುವುದಾಗಿ ಅವರು ಘೋಷಿಸಿಬಿಟ್ಟಿದ್ದಾರೆ.
ಟ್ರಂಪ್ ಆಡಳಿತದಲ್ಲಿ ನಿಮ್ಮ ಉತ್ಪನ್ನವನ್ನು ಅಮೆರಿಕದಲ್ಲಿ ತಯಾರಿಸದೇ ಹೋದಲ್ಲಿ ಸುಂಕ ತೆರಬೇಕಾಗುತ್ತದೆ. ಕೆಲ ಪ್ರಕರಣಗಳಲ್ಲಿ ಹೆಚ್ಚು ಸುಂಕ ಕಟ್ಟಬೇಕಾಗುತ್ತದೆ. ದಶಕಗಳ ಕಾಲ ಬೇರೆ ದೇಶಗಳು ನಮ್ಮ ಮೇಲೆ ಸುಂಕ ಹೇರಿವೆ. ಅಂಥ ದೇಶಗಳ ವಿರುದ್ಧ ಸುಂಕ ವಿಧಿಸುವ ಸರದಿ ಈಗ ನಮ್ಮದು’ ಎಂದು ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಹಲವು ಅಧ್ಯಕ್ಷರು 4ರಿಂದ 8 ವರ್ಷ ಕಾಲ ಮಾಡಲು ಸಾಧ್ಯವಾಗದಿದ್ದನ್ನು ನಾನು ಕೇವಲ 43 ದಿನಗಳಲ್ಲಿ ಸಾಧಿಸಿದ್ದೇನೆ. ಅಷ್ಟೇ ಅಲ್ಲ, ಇದು ಇನ್ನೂ ಆರಂಭ ಮಾತ್ರವೇ’ ಎಂದು ಡೊನಾಲ್ಡ್ ಟ್ರಂಪ್ ಮುಂಬರುವ ದಿನಗಳಲ್ಲಿ ತಮ್ಮ ಆಡಳಿತದಲ್ಲಿ ಇನ್ನಷ್ಟು ನಿಷ್ಠುರ ನೀತಿಗಳು ಬರಲಿರುವ ಸುಳಿವನ್ನು ನೀಡಿದ್ದಾರೆ.
ಅಮೆರಿಕ ರೆಸಿಪ್ರೋಕಲ್ ಟ್ಯಾರಿಫ್ ಅಥವಾ ಪ್ರತಿ ಸುಂಕ ನೀತಿ ಅನುಸರಿಸುವ ಉದ್ದೇಶ ಅಮೆರಿಕದ ಉತ್ಪನ್ನಗಳಿಗೆ ಮಾರುಕಟ್ಟೆ ಹೆಚ್ಚಿಸುವುದು. ಹೆಚ್ಚಿನ ದೇಶಗಳು ಹೆಚ್ಚಿನ ಮಟ್ಟದ ಆಮದು ಸುಂಕ ವಿಧಿಸುತ್ತವೆ. ಆದರೆ, ಅಮೆರಿಕ ಸರ್ಕಾರ ಕಡಿಮೆ ಸುಂಕ ವಿಧಿಸುತ್ತದೆ. ಈ ಕಾರಣಕ್ಕೆ ಅಮೆರಿಕದ ರಫ್ತಿಗಿಂತ ಆಮದು ಹೆಚ್ಚಿದೆ. ಅಮೆರಿಕದಲ್ಲಿ ತಯಾರಾದ ಉತ್ಪನ್ನಗಳಿಗೆ ಮಾರುಕಟ್ಟೆ ಸಾಲದಾಗಿದೆ. ಅಮೆರಿಕದ ಕಂಪನಿಗಳು ಬೇರೆ ದೇಶಕ್ಕೆ ಹೋಗಿ ಅಲ್ಲಿ ತಯಾರಿಕೆ ಮಾಡಿ ಉತ್ಪನ್ನಗಳನ್ನು ಮಾರಬೇಕಾಗುತ್ತಿದೆ. ಇದರಿಂದ ತನಗೆ ನಿರೀಕ್ಷಿತ ಆದಾಯ ಬರುವುದಿಲ್ಲ. ಉದ್ಯೋಗಸೃಷ್ಟಿ ಆಗುವುದಿಲ್ಲ ಎನ್ನುವುದು ಅಮೆರಿಕದ ವಾದವಾಗಿದೆ.
ಈ ಮುಂಚೆ ಅಮೆರಿಕ ದೇಶವು ಕೆನಡಾ ಮತ್ತು ಮೆಕ್ಸಿಕೋದ ಬಹುತೇಕ ಉತ್ಪನ್ನಗಳಿಗೆ ತೆರಿಗೆಯನ್ನೇ ವಿಧಿಸುತ್ತಿರಲಿಲ್ಲ. ಈಗ ಶೇ. 25ರಷ್ಟು ತೆರಿಗೆ ಹಾಕಲು ನಿರ್ಧರಿಸಿದೆ. ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 5ರಿಂದ 10ರಷ್ಟು ತೆರಿಗೆ ಹಾಕುತ್ತದೆ. ಆದರೆ, ಭಾರತವು ಅಮೆರಿಕದ ಉತ್ಪನ್ನಗಳಿಗೆ ಹಾಕುವ ಸುಂಕವು ಶೇ. 20ರಿಂದ 40ರ ಶ್ರೇಣಿಯಲ್ಲಿದೆ. ಕೆಲ ಉತ್ಪನ್ನಗಳಿಗೆ ನೂರಕ್ಕೆ ನೂರು ಸುಂಕ ಹಾಕಲಾಗುತ್ತಿದೆ. ಚೀನಾ ಕೂಡ ದೊಡ್ಡ ಪ್ರಮಾಣದಲ್ಲಿ ಅಮೆರಿಕದ ಉತ್ಪನ್ನಗಳಿಗೆ ಸುಂಕ ವಿಧಿಸುತ್ತದೆ. ಹೀಗಾಗಿಯೇ, ಡೊನಾಲ್ಡ್ ಟ್ರಂಪ್ ಅವರು ಭಾರತ, ಚೀನಾದ ಸುಂಕದ ಬಗ್ಗೆ ಬಹಳ ನಿಷ್ಠುರವಾಗಿ ಮಾತನಾಡುತ್ತಿದ್ದಾರೆ