ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಕೋರ್ಟ್ಗೆ ಸಲ್ಲಿಕೆಯಾಗಿರುವ ದೋಷಾರೋಪ ಪಟ್ಟಿ ಈಗ ಲಭ್ಯವಾಗಿದೆ. ಈ ಚಾರ್ಜ್ಶೀಟ್ನಲ್ಲಿ ಎ-1 ಆರೋಪಿ ಆಗಿರುವ ಪವಿತ್ರಾಗೌಡ (Pavithra Gowda) ಅವರು ದರ್ಶನ್ ಜೊತೆಗಿನ ಸಂಬಂಧದ ಬಗ್ಗೆ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ.
ನಾನು ಮತ್ತು ದರ್ಶನ್ (Darshan) ಸಲುಗೆಯಿಂದ ಒಬ್ಬರನ್ನೊಬ್ಬರು ಪ್ರೀತಿ ಮಾಡುತ್ತಿದ್ದೆವು. ದರ್ಶನ್ ಅವರು ವಿಜಯಲಕ್ಷ್ಮಿ ಅವರೊಂದಿಗೆ ಮದುವೆಯಾಗಿ ಮಗ ಇರುವುದು ಮೊದಲು ಗೊತ್ತಿರಲಿಲ್ಲ, ನಂತರ ತಿಳಿಯಿತು. ನಾವು ವಾಸ ಮಾಡುತ್ತಿದ್ದ ಜೆ.ಪಿ ನಗರದ ಮನೆಗೆ ದರ್ಶನ್ ಬರುತ್ತಿದ್ದರು. ಆಗಾಗ್ಗೆ ನಾವು ಲಾಂಗ್ ಡ್ರೈವ್ ಹೋಗುತ್ತಿದ್ದೆವು. ನಾನು, ನನ್ನ ಮಗಳು ಹಾಗೂ ದರ್ಶನ್ ಮೂವರು ವಾಸ ಮಾಡೋದಕ್ಕಾಗಿಯೇ ಆರ್.ಆರ್ ನಗರದಲ್ಲಿ (RR Nagar) ನನ್ನ ಹೆಸರಿಗೆ ಮನೆ ಖರೀದಿ ಮಾಡಿದ್ದರು. ಮನೆಯನ್ನು ಖರೀದಿಸಲು ನಿರ್ಮಾಪಕ ಸೌಂದರ್ಯ ಜಗದೀಶ್ ಮೂಲಕ 1.75 ಕೋಟಿ ರೂ. ಹಣವನ್ನು ಕನಕಪುರ ರಸ್ತೆಯಲ್ಲಿರುವ ನನ್ನ ಹೆಚ್ಡಿಎಫ್ಸಿ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದರು. 2018ರ ಫೆಬ್ರವರಿ ತಿಂಗಳಲ್ಲಿ ಮನೆಯ ಗೃಹಪ್ರವೇಶ ಮಾಡಿ ಅಂದಿನಿಂದ ಅಲ್ಲೇ ವಾಸವಿದ್ದೆವು.
ಇನ್ನೂ ದರ್ಶನ್ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಸುಮಾರು 7-8 ವರ್ಷಗಳಿಂದ ಪರಿಚಯವಾಗಿದ್ದ. ನಂತರ ಪವನ್ ನಮ್ಮ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ. ಪವನ್ ನನಗೆ ತುಂಬಾ ಚೆನ್ನಾಗಿ ಗೊತ್ತಿದ್ದ, ನನ್ನ ಎಲ್ಲಾ ವ್ಯವಹಾರಗಳೂ ಅವನಿಗೆ ಗೊತ್ತಿತ್ತು. ದರ್ಶನ್ ಮನೆ ಮತ್ತು ನಮ್ಮ ಮನೆಗೆ ಸುಮಾರು ಒಂದೂವರೆ ಕಿಮೀ ದೂರವಿತ್ತು. ಪವನ್ಗೆ ನಮ್ಮ ಮೇಲೆ ಅತಿಯಾದ ಪ್ರೀತಿ, ವಾತ್ಸಲ್ಯ ಇತ್ತು. ನನ್ನನ್ನು ಅಕ್ಕ ಅಕ್ಕ ಎಂದು ಕರೆಯುತ್ತಿದ್ದ
ದರ್ಶನ್ ಜೊತೆಗೆ ಸಂಪರ್ಕ ಬೆಳೆದಿದ್ದು ಹೇಗೆ?
2014ರಲ್ಲಿ ಬುಲ್ ಬುಲ್ ಚಿತ್ರದ ಆಡಿಷನ್ಗೆ ಹೋಗಿದ್ದಾಗ ನನ್ನ ಮಾಡೆಲಿಂಗ್ ಪ್ರೊಫೈಲನ್ನು ದರ್ಶನ್ ಅವರಿಗೆ ಷೇರು ಮಾಡಿ ಅವರೊಂದಿಗೆ ಮಾತನಾಡಲು ಅವರ ಮೊಬೈಲ್ ನಂಬರ್ ಅನ್ನು ಪರಿಚಿತ ಮ್ಯಾನೇಜರ್ ಅವರಿಂದ ಪಡೆದುಕೊಂಡಿದ್ದೆ. ಈ ವಿಚಾರವಾಗಿ ದರ್ಶನ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಬುಲ್ ಬುಲ್ ಚಿತ್ರಕ್ಕೆ ಈಗಾಗಲೇ ಆಡಿಷನ್ ಮುಗಿದಿದೆ. ಬೇರೆ ಯಾವುದಾದರೂ ಚಿತ್ರಕ್ಕೆ ಅವಶ್ಯಕತೆಯಿದ್ದರೆ ತಿಳಿಸುವುದಾಗಿ ಹೇಳಿದ್ದರು. ನಂತರ ಇದನ್ನೆ ನೆಪವಾಗಿಟ್ಟುಕೊಂಡು ಪ್ರತಿದಿನ ದರ್ಶನ್ ಅವರಿಗೆ ಫೋನ್ನಲ್ಲಿ, ವಾಟ್ಸಪ್ನಲ್ಲಿ ಚಾಟಿಂಗ್ ಮತ್ತು ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದೇವು. ನಂತರ ಆಗಾಗ್ಗೆ ಭೇಟಿ ಮಾಡುತ್ತಿದೆ ಎಂದು ಪವಿತ್ರಾಗೌಡ ಸ್ವಇಚ್ಛಾ ಹೇಳಿಕೆ ನೀಡಿರುವುದು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ
ರೇಣುಕಾಸ್ವಾಮಿ ತಗಲಾಕ್ಕೊಂಡಿದ್ದು ಹೇಗೆ?
2013ರಲ್ಲಿ ನಾನು ವೈಯಕ್ತಿಕ ಹಾಗೂ ಮಾಡೆಲಿಂಗ್ ವಿಚಾರ ಹಂಚಿಕೊಳ್ಳಲು ನನ್ನದೇ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದೆ. ಈ ಖಾತೆಯನ್ನು ನನ್ನ ಐಫೋನ್ ಮ್ಯಾಕ್ಸ್-14 ಮೊಬೈಲ್ನಿಂದಲೇ ನಿರ್ವಹಣೆ ಮಾಡುತ್ತಿದ್ದೆ. ಈ ಫೋನನ್ನು ದರ್ಶನ್ ಅವರೇ ಕೊಡಿಸಿದ್ದರು. ಹಲವಾರು ನೆಟ್ಟಿಗರು ನನ್ನ ಇನ್ಸ್ಟಾ ಖಾತೆಯನ್ನು ಹಿಂಬಾಲಿಸುತ್ತಿದ್ದರು. ಖಾತೆ ಪಬ್ಲಿಕ್ ಆಗಿದ್ದರಿಂದ ನೆಟ್ಟಿಗರು ನೇರವಾಗಿ ಮೆಸೇಜ್ ಮಾಡುತ್ತಿದ್ದರು. ಇನ್ಬಾಕ್ಸ್ ತೆರೆದು ನೋಡಿದಾಗ ಕೆಲವರು ಅಸಭ್ಯ ರೀತಿಯ ಮೆಸೇಜ್ ಕಳಿಸಿರುತ್ತಿದ್ದರು. ಅಂತಹ ನೆಟ್ಟಿಗರ ಪ್ರೊಫೈಲ್ಗಳನ್ನು ಬ್ಲಾಕ್ ಮಾಡುತ್ತಿದ್ದೆ. ಕೆಲವೊಮ್ಮೆ ಈ ರೀತಿ ಅಸಹ್ಯಕರ ಮೆಸೇಜ್ಗಳು ಬಂದಾಗ ಸ್ಕ್ರೀನ್ ಶಾಟ್ ತೆಗೆದು ದರ್ಶನ್ ಅವರಿಗೂ ತೋರಿಸುತ್ತಿದ್ದೆ.