ಚಳಿಗಾಲದಲ್ಲಿ ಬೆಚ್ಚಗಿರುವ ಆಹಾರ ಸೇವಿಸಿದರೆ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅದರಲ್ಲೂ ಹೆಚ್ಚಿನ ಪ್ರಮಾಣದ ವಿಟಮಿನ್, ಪ್ರೋಟಿನ್ ಹೊಂದಿರುವ ಆಹಾರ, ತರಕಾರಿ ಸೇವಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆರೋಗ್ಯಕರ ಕ್ಯಾರೆಟ್ ಬಾದಾಮ್ ಮಿಲ್ಕ್ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ
ಬೇಕಾಗುವ ಸಾಮಗ್ರಿಗಳು:
ಖರ್ಜೂರ – 8ರಿಂದ 10
ಬಾದಾಮಿ – 10ರಿಂದ 12
ಕ್ಯಾರೆಟ್ -2
ಹಾಲು – ಅರ್ಧ ಲೀಟರ್
ಏಲಕ್ಕಿ – 4
ಬೆಲ್ಲದ ಪೌಡರ್ – 2 ಚಮಚ
ಮಾಡುವ ವಿಧಾನ:
* ಮೊದಲಿಗೆ ಬಾದಾಮಿ ಹಾಗೂ ಖರ್ಜೂರವನ್ನು ಒಂದು ಬೌಲ್ನಲ್ಲಿ ಹಾಕಿ ಅದಕ್ಕೆ ನೀರನ್ನು ಹಾಕಿ 30 ನಿಮಿಷಗಳ ಕಾಲ ನೆನೆಸಿಡಿ.
* ಬಳಿಕ ಸಿಪ್ಪೆ ತೆಗೆದ ಬಾದಾಮಿಯನ್ನು ಒಂದು ಮಿಕ್ಸಿ ಜಾರಿನಲ್ಲಿ ಹಾಕಿಕೊಳ್ಳಿ. ಬಳಿಕ ಅದಕ್ಕೆ ಹೆಚ್ಚಿದ ಕ್ಯಾರೆಟ್ ಅನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
* ನಂತರ ಅದಕ್ಕೆ ಖರ್ಜೂರ ಹಾಗೂ ಅದರ ನೀರನ್ನು ಸೇರಿಸಿಕೊಂಡು ನುಣ್ಣಗೆ ರುಬ್ಬಿಕೊಳ್ಳಿ.
* ಈಗ ಒಂದು ಬೌಲ್ನಲ್ಲಿ ಈ ಮಿಶ್ರಣವನ್ನು ಹಾಕಿಕೊಂಡು ಅದಕ್ಕೆ ಹಾಲನ್ನು ಸೇರಿಸಿಕೊಂಡು ಕುದಿಯಲು ಬಿಡಿ.
* ನಂತರ ಅದಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಹಾಕಿ 2-3 ನಿಮಿಷ ಕುದಿಯಲು ಬಿಡಿ.
* ಹಾಲು ಕುದಿದ ಬಳಿಕ ಗ್ಯಾಸ್ ಆಫ್ ಮಾಡಿ ಅದಕ್ಕೆ ಬೆಲ್ಲದ ಪುಡಿಯನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ಬಿಸಿಬಿಸಿ ಕ್ಯಾರೆಟ್ ಬಾದಾಮ್ ಮಿಲ್ಕ್ ಸವಿಯಲು ಸಿದ್ಧ