ಗದಗ : ಬಡ್ಡಿ ದಂಧೆಕೋರರ ಮನೆ ಮೇಲೆ ದಾಳಿ ವೇಳೆ 26 ಲಕ್ಷ ರೂಪಾಯಿ ಹಣ ಸೀಜ್ ಮಾಡಿದ್ದ ಪ್ರಕರಣದಲ್ಲಿ ಇದೀಗ ಟ್ವಿಸ್ಟ್ ಸಿಕ್ಕಿದೆ. ದಾಳಿ ವೇಳೆ ಪೊಲೀಸರು ಜಪ್ತಿ ಮಾಡಿದ ಹಣ ಬಡ್ಡಿದಂಧೆಯದ್ದಲ್ಲ, ಆ ಹಣ ಮಗುವಿನ ಲಿವರ್ ಚಿಕಿತ್ಸೆಗೆ ತಂದು ಇಟ್ಟ ಹಣ ಎಂದು ಮನೆಯವರು ಹೇಳುತ್ತಿದ್ದಾರೆ. ಇತ್ತ ಮಗನ ಚಿಕಿತ್ಸೆಗೆ ಹೊಂದಿಸಿದ್ದ ಹಣ ಸೀಜ್ ಆಗಿದ್ದಕ್ಕೆ ಮನನೊಂದು ಬಡ್ಡಿದಂಧೇಕೋರ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಂಗಮೇಶ ದೊಡ್ಡಣ್ಣವರ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗದಗ ನಗರದ ಕಾಶಿವಿಶ್ವನಾಥ ಕಾಲೋನಿಯ ಮನೆಯಲ್ಲಿ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಕೂಡಲೇ ಅಲ್ಲಿದ್ದವರು ಅವರನ್ನು ರಕ್ಷಣೆ ಮಾಡಿ ಗದಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಎಸ್ ಡಿ ಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಬೆನ್ನು ಮೂಳೆ ಕಟ್ ಆಗಿರೋ ಸಾಧ್ಯತೆ ಇದ್ದು, ಸಂಗಮೇಶ್ ಸ್ಥಿತಿ ಚಿಂತಾಜನಕವಾಗಿದೆ.
ಸೀಜ್ ಮಾಡಿರೋ ಹಣ ಬಡ್ಡಿ ದಂಧೆಯದ್ದಲ್ಲ, ಮಗನ ಚಿಕಿತ್ಸೆಗೆ ಹೊಂದಿಸಿದ್ದ ಹಣ ಅಂತ ಎಂದು ಪೊಲೀಸರ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಗಮೇಶನ ಮಗನಿಗೆ ಲಿವರ್ ಆಪರೇಷನ್ ಗಾಗಿ 25 ಲಕ್ಷ ರೂ ಹಣ ಹೊಂದಿಸಲಾಗಿತ್ತು. ಹಣ ಸೀಜ್ ಮಾಡಿದ್ದಕ್ಕೆ ತೀವ್ರ ಮನನೊಂದಿದ್ದ ಸಂಗಮೇಶ್, ಹಣವೂ ಇಲ್ಲ, ಮಗನ ಚಿಕಿತ್ಸೆಯೂ ಮಾಡಿಸೋಕೆ ಆಗಲಿಲ್ಲ ಅಂತಾ ಗೋಳಾಡಿದ್ದರು. ಸಂಗಮೇಶ್ ಪೊಲೀಸ್ ವಿಚಾರಣೆಯಿಂದ ಮನನೊಂದು ಆತ್ಮಹತ್ಯೆ ಯತ್ನಿಸಿದ ಬಗ್ಗೆ ಕುಟುಂಬದವರು ಆರೋಪಿಸಿದ್ದಾರೆ. ರೇಡ್ ಮಾಡಿದಾಗ ಪೊಲೀಸರಿಗೆ ಎಷ್ಟೇ ಹೇಳಿದ್ರೂ ಕೇಳಿಲ್ಲ. ಯಾರದ್ದೋ ಒತ್ತಡಕ್ಕೆ ಮಣಿದು ಕೇಸ್ ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ ಸಂಗಮೇಶನ ಸಹೋದರಿ ಆರೋಪಿಸಿದ್ದಾರೆ.
ಕಳೆದ ಫೆ.9ನೇ ತಾರೀಕು ಗದಗ ಬೆಟಗೇರಿ ಅವಳಿ ನಗರದ 12 ಕಡೆಗಳಲ್ಲಿ ಪೊಲೀಸರು ದಾಳಿ ಮಾಡಿದ್ದು, ದಾಳಿ ವೇಳೆ ಸಂಗಮೇಶ್ ಮನೆಯಲ್ಲಿ 26 ಲಕ್ಷ 57 ಸಾವಿರ ನಗದು ಪತ್ತೆಯಾಗಿತ್ತು. ಸಂಗಮೇಶ್ ಸೇರಿದಂತೆ 12 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.