ಹುಬ್ಬಳ್ಳಿ;ಕರ್ನಾಟಕ ವಿಧಾನ ಸಭೆಯ ಸದಸ್ಯರನ್ನು ಶಾಸಕರೆಂದು ಸಂಭೋದಿಸುವ ರೀತಿಯಲ್ಲಿ ವಿಧಾನ ಪರಿಷತ್ತಿನ ಸದಸ್ಯರನ್ನು ಸಹ ಶಾಸಕರೆಂದು ಸಂಭೋದಿಸುವುದರ ಜೊತೆಗೆ ಸರ್ಕಾರದ ಆಮಂತ್ರಣ ಪತ್ರಿಕೆಗಳಲ್ಲಿ ಇದೇ ರೀತಿ ಉಲ್ಲೇಖಿಸಿ ಶಿಷ್ಠಾಚಾರ ನಿಯಮವನ್ನು ಪಾಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ.
ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರವೊಂದನ್ನು ಬರೆದಿರುವ ಸಭಾಪತಿ ಬಸವರಾಜ ಹೊರಟ್ಟಿ, ಕರ್ನಾಟಕ ರಾಜ್ಯದ ವಿಧಾನ ಮಂಡಲದಲ್ಲಿ ವಿಧಾನ ಪರಿಷತ್ತು ಹಾಗೂ ವಿಧಾನ ಸಭೆ ಎಂದು ಎರಡು ಪ್ರತ್ಯೇಕ ಶಾಸನ ಸಭೆಗಳಿವೆ. ಚಿಂತಕರ ಚಾವಡಿ, ಪ್ರಾಜ್ಞರ ಮನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಧಾನ ಮಂಡಲದ ಮೇಲ್ಮನೆಯಾಗಿರುವ ವಿಧಾನ ಪರಿಷತ್ತಿನಲ್ಲಿ ೭೫ ಜನ ಸದಸ್ಯರಿದ್ದು, ಪದವೀಧರರು, ಶಿಕ್ಷಕರು, ಸ್ಥಳೀಯ ಸಂಸ್ಥೆಗಳಿAದ ಚುನಾಯಿತರಾದವರು,
ವಿಧಾನ ಸಭೆಯಿಂದ ನಾಮ ನಿರ್ದೇಶಿತರು ಹಾಗೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರುಗಳು ಸದರಿ ವಿಧಾನ ಪರಿಷತ್ತಿನ ಸದಸ್ಯರಾಗಿರುತ್ತಾರೆ. ವಿಧಾನ ಸಭೆಯಲ್ಲಿಯೂ ೨೨೪ ಸದಸ್ಯರು ಜನರಿಂದ ಚುನಾಯಿತಗೊಂಡವರಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ವಿಧಾನ ಸಭೆ ಹಾಗೂ ವಿಧಾನ ಪರಿಷತ್ತಿನ ಸದಸ್ಯರಿಗೆ ಅಧಿಕಾರ, ವೇತನ ಸೇರಿದಂತೆ ಎಲ್ಲಾ ಸೌಲಭ್ಯಗಳು ಏಕರೂಪವಾಗಿರುತ್ತವೆ. ಜೊತೆಗೆ ಎರಡು ಮನೆಯ ಸದಸ್ಯರಿಗೂ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ದಿ ವಾರ್ಷಿಕ ನಿಧಿಯನ್ನು ಸಹ ಸಮಾನವಾಗಿ ನೀಡಲಾಗುತ್ತಿದೆ.
ಆದರೆ ವಿಷಾದದ ಸಂಗತಿ ಎಂದರೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಸದಸ್ಯರನ್ನು ಅಧಿಕಾರಿ ವರ್ಗದವರು ತಾರತಮ್ಯದಿಂದ ಕಾಣುತ್ತಿರುವುದು ಗಮನಕ್ಕೆ ಬಂದಿದೆ. ವಿಧಾನ ಸಭೆಯ ಸದಸ್ಯರನ್ನು ಶಾಸಕರೆಂದು ಹಾಗೂ ವಿಧಾನ ಪರಿಷತ್ತಿನ ಸದಸ್ಯರನ್ನು ವಿಧಾನ ಪರಿಷತ್ತಿನ ಸದಸ್ಯರೆಂದೇ ಸಂಭೋಧಿಸುತ್ತಿದ್ದು, ಸರ್ಕಾರದ ವಿವಿಧ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳಲ್ಲಿ ವಿಧಾನ ಸಭೆಯ ಸದಸ್ಯರನ್ನು ಶಾಸಕರೆಂದು ಹಾಗೂ ವಿಧಾನ ಪರಿಷತ್ತಿನ ಸದಸ್ಯರನ್ನು ವಿಧಾನ ಪರಿಷತ್ತಿನ ಸದಸ್ಯರೆಂದೇ ಮುದ್ರಿಸಲಾಗುತ್ತಿರುವುದು ಕಂಡು ಬರುತ್ತಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಇತ್ತೀಚೆಗೆ ತಾನೆ ಬೆಳಗಾವಿಯ ಸುವರ್ಣ ಸೌಧದಲ್ಲಿ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದ ವಿಧಾನ ಪರಿಷತ್ತಿನ ಕಲಾಪದಲ್ಲಿ ಹಲವಾರು ಸದಸ್ಯರುಗಳು ಇದರ ಬಗ್ಗೆ ಪ್ರಸ್ತಾಪ ಮಾಡಿದ್ದು, ಅಧಿಕಾರಿಗಳ ವರ್ತನೆ ಬಗ್ಗೆ ತೀವ್ರ ಅಸಮಧಾನ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಈ ಹಿಂದೆ ಹಲವಾರು ಬಾರಿ ಈ ವಿಷಯದ ಕುರಿತು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿಗಳಿಗೆ ಸರ್ಕಾರದಿಂದ ಆದೇಶ ಹೊರಡಿಸಿದ್ದರೂ ಸಹ ಸೂಕ್ತವಾಗಿ ಪಾಲನೆಯಾಗುತ್ತಿಲ್ಲ ಎನ್ನುವುದು ವಿಷಾದನೀಯ ಸಂಗತಿ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಕಾರಣ ಈ ಕ್ಷಣದಿಂದಲೇ ಉಭಯ ಸದನಗಳ ಸದಸ್ಯರುಗಳನ್ನು ಶಾಸಕರು, ವಿಧಾನ ಸಭೆ ಮತ್ತು ಶಾಸಕರು ವಿಧಾನ ಪರಿಷತ್ತು ಎಂದು ಸಂಭೋಧಿಸುವುದರ ಜೊತೆಗೆ ಸರ್ಕಾರದ ಆಮಂತ್ರಣ ಪತ್ರಿಕೆಗಳಲ್ಲಿ ಇದೇ ರೀತಿ ಉಲ್ಲೇಖಿಸಿ ಶಿಷ್ಠಾಚಾರ ನಿಯಮವನ್ನು ಪಾಲಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಲಿಖಿತ ಮೂಲಕ ಕಟ್ಟು ನಿಟ್ಟಿನ ನಿರ್ದೇಶನ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದಾರೆ.