ಚಿಕ್ಕಮಗಳೂರು: ಮೂಡಿಗೆರೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಸರ್ವೇ ಅಧಿಕಾರಿ ಶಿವಕುಮಾರ್ ಹನಿಟ್ರ್ಯಾಪ್ ಕಾರಣ ಎನ್ನಲಾಗುತ್ತಿದೆ. ಶಿವಕುಮಾರ್ ಅವರ ಕಚೇರಿಯಲ್ಲಿ ಡೆತ್ ನೋಟ್ ಸಿಕ್ಕಿದೆ.
ಸರ್ವೇಗೆ ಹೋಗಿದ್ದ ವೇಳೆ ಶಿವಕುಮಾರ್ ಅವರಿಗೆ ಮಹಿಳೆಯೊಬ್ಬರ ಪರಿಚಯವಾಗಿದೆ. ಬಳಿಕ ಫೋನ್ನಲ್ಲಿ ಆತ್ಮೀಯವಾಗಿ ಮಾತನಾಡಿದ್ದಾರೆ. ಇದೇ ವಿಚಾರ ಮುಂದಿಟ್ಟುಕೊಂಡು ಮಹಿಳೆ ಹಣಕ್ಕಾಗಿ ಪೀಡಿಸುತ್ತಿದ್ದಳು ಎನ್ನಲಾಗುತ್ತಿದೆ. ಹಿಂದೆ ಆ ಮಹಿಳೆಗೆ ಶಿವಕುಮಾರ್ ಈಗಾಗಲೇ ಒಂದೂವರೆ ಲಕ್ಷ ರೂ. ಹಣ ನೀಡಿದ್ದರು. ಮತ್ತೆ ಹಣ ಕೇಳಿದ್ದಕ್ಕೆ ಅವರು ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ವಿಚಾರ ಎಫ್ಐಆರ್ನಲ್ಲಿ ಕೂಡ ಪ್ರಸ್ತಾಪವಾಗಿದೆ.
ಅದೂ ಅಲ್ಲದೇ ಶಿವಕುಮಾರ್ ಅಧಿಕಾರದ ವೇಳೆ ಸರಿಯಾಗಿ ಸರ್ವೆ ಮಾಡಿಲ್ಲ ಎಂದು ಇಬ್ಬರು ಅವರ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದರು. ಅಮಾನತ್ತಾಗುತ್ತೇನೆ ಎಂದು ಆತಂಕಕ್ಕೀಡಾಗಿದ್ದರು. ಹಾಗಾಗಿ, ಕಳೆದ ಎಂಟತ್ತು ತಿಂಗಳಿಂದ ಮನೆಯಲ್ಲಿ ಏಕಾಂಗಿಯಾಗಿದ್ದ ಶಿವಕುಮಾರ್ ಖಿನ್ನತೆಗೆ ಓಳಗಾಗಿ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಮೂಡಿಗೆರೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.