ಆಹಾರ ಪ್ರಿಯರ ಮೆಚ್ಚಿನ ಖಾದ್ಯಗಳಲ್ಲಿ ಕಬಾಬ್ ಕೂಡಾ ಒಂದು. ತರಕಾರಿ, ಮೀನು, ಮಾಂಸ, ಸೀಗಡಿ ಇತ್ಯಾದಿಗಳಿಂದ ತಯಾರಿಸಲಾಗುವ ಇವುಗಳಲ್ಲಿ ಹಲವಾರು ವಿಧಗಳಿವೆ. ಅದರ ಗಾತ್ರ, ಆಕಾರ, ತಯಾರಿಸುವ ವಿಧಾನ, ಬಳಸಲಾಗುವ ಮಸಾಲೆ ಸಾಮಗ್ರಿಗಳಿಗೆ ಅನುಗುಣವಾಗಿ ಕಬಾಬ್ಗಳನ್ನು ಗುರುತಿಸಲಾಗುತ್ತದೆ.
ಬಹುತೇಕ ಜನರ ಫೇವರಿಟ್ ಆಗಿರುವ ಕಲ್ಮಿ ಕಬಾಬ್ ಅನ್ನು ಕೋಳಿಯ ಕಾಲಿನ ಭಾಗದ ಮಾಂಸ ಮತ್ತು ಮೂಳೆಯಿಂದ ತಯಾರಿಸಲಾಗುತ್ತದೆ. ಇದನ್ನು ಮಸಾಲೆ ಸಾಮಗ್ರಿ, ಮೊಸರು ಮತ್ತು ಪುದೀನ ಪೇಸ್ಟ್ನ ಮಿಶ್ರಣದಲ್ಲಿ ಮ್ಯಾರಿನೇಟ್ ಮಾಡಿ ಆಮೇಲೆ ಗ್ರಿಲ್ ಮಾಡಲಾಗುತ್ತದೆ.
ಇಲ್ಲಿ ನಾವು ಕಲ್ಮಿ ಕಬಾಬ್ ಮಾಡುವುದು ಹೇಗೆ ಎಂಬ ರೆಸಿಪಿ ನೀಡಿದ್ದೇವೆ ನೋಡಿ:
ಬೇಕಾಗುವ ಸಾಮಗ್ರಿ
- ಚಿಕನ್ ಲೆಗ್ ಪೀಸ್ 5-6
- ಖಾರದ ಪುಡಿ 2 ಚಮಚ
- ಕೊತ್ತಂಬರಿ ಪುಡಿ 1 ಚಮಚ
- ಅರಿಶಿಣ ಪುಡಿ 4 ಚಮಚ
- ಗರಂ ಮಸಾಲ ಪುಡಿ 1/4 ಚಮಚ
- ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
- ಈರುಳ್ಳಿ ಪೇಸ್ಟ್ (ಬೇಕಾದರೆ ಮಾತ್ರ ಬಳಸಬಹುದು)
- ರುಚಿಗೆ ತಕ್ಕ ಉಪ್ಪು
- ನಿಂಬೆಹಣ್ಣು 1/2
ಮಾಡುವ ವಿಧಾನ:
- ಅರ್ಧ ಚಮಚ ಖಾರದ ಪುಡಿ, ಅರ್ಧ ಚಮಚ ಕೊತ್ತಂಬರಿ ಪುಡಿ, ಉಪ್ಪು, ಸ್ವಲ್ಪ ಅರಿಶಿಣ ಪುಡಿ ಹಾಕಿ ಮಿಶ್ರ ಮಾಡಿ.
- ಈ ಮಸಾಲೆ ಮಿಶ್ರಣವನ್ನು ಲೆಗ್ ಪೀಸ್ಗೆ ಹಾಕಿ ಸ್ಟೀಮ್ನಲ್ಲಿ 30 ನಿಮಿಷ ಬೇಯಿಸಿ. ಇಡ್ಲಿ ಪಾತ್ರೆಯಲ್ಲಿ ಬೇಕಾದರೂ ಬೇಯಿಸಬಹುದು.
- ನಂತರ ಬೆಂದ ಚಿಕನ್ ಪೀಸ್ ತೆಗೆದು ಒನದು ಪ್ಲೇಟ್ನಲ್ಲಿ ಹಾಕಿಡಿ. ಆ ಪ್ಲೇಟ್ಗೆ ಉಳಿದ ಮಸಾಲೆ ಮಿಶ್ರಣ ಹಾಕಿ ಸ್ವಲ್ಪ ನೀರು ಹಾಕಿ ಮಿಶ್ರ ಮಾಡಿ ನಂತರ ಲೆಗ್ಪೀಸ್ಗೆ ಮತ್ತೊಮ್ಮೆ ಹಚ್ಚಿ.
- ತವಾ ಬಿಸಿ ಮಾಡಿ ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕಿ ಅದರಲ್ಲಿ ಈ ಚಿಕನ್ ಲೆಗ್ ಪೀಸ್ 10 ನಿಮಿಷ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಇಷ್ಟು ಮಾಡಿದರೆ ಕಲ್ಮಿ ಕಬಾಬ್ ರೆಡಿ.