ಹಾವೇರಿ:- ಹಾವೇರಿಯ ಜಿಲ್ಲೆಯಲ್ಲಿ 22 ವರ್ಷದ ಯುವತಿಯ ಕೊಲೆ ಆಗಿದ್ದು, ಅಪರಿಚಿತ ಶವ ಎಂದುಕೊಂಡು ಪೊಲೀಸರೇ ಅಂತ್ಯಸಂಸ್ಕಾರ ಮಾಡಿರುವ ಘಟನೆ ನಡೆದಿದೆ. ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಕೊಲೆಯಾಗಿರುವ ದೃಢವಾದ ಬೆನ್ನಲ್ಲಿಯೇ ಯಾವುದೇ ಮಾಹಿತಿ ನೀಡದೇ ಅಂತ್ಯಸಂಸ್ಕಾರ ಮಾಡಿದ ಪೊಲೀಸರಿಗೆ ಸಂಕಷ್ಟ ಎದುರಾಗಿದೆ.
ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಯುವತಿ 22 ವರ್ಷದ ಸ್ವಾತಿ ಮಾರ್ಚ್ 3 ರಂದು ನಾಪತ್ತೆಯಾಗಿದ್ದಳು. ಮೂರು ದಿನಗಳ ಕಾಲ ಮನೆಯವರೆಲ್ಲಾ ಹುಡುಕಿ 7ನೇ ತಾರೀಖಿನಿಂದ ಮಿಸ್ಸಿಂಗ್ ದೂರು ದಾಖಲಿಸಿದ್ದಾರೆ. ಈಕೆಯ ಶವ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಪತ್ತೇಪುರ ಗ್ರಾಮದ ತುಂಗಭದ್ರಾ ನದಿ ಬಳಿ ಪತ್ತೆಯಾಗಿತ್ತು. ಮಾರ್ಚ್ 6 ರಂದು ಯುವತಿಯ ಮೃತದೇಹ ಸಿಕ್ಕಿತ್ತು.
ಮೊದಲು ಅಪರಿಚಿತ ಯುವತಿ ಶವ ಎಂದು ಘೋಷಿಸಿದ್ದ ಹಲಗೇರಿ ಪೊಲೀಸರು, ವಾರಸುದಾರರರು ಯಾರೂ ಇಲ್ಲದ ಹಿನ್ನಲೆಯಲ್ಲಿ, ಮರಣೋತ್ತರ ಪರೀಕ್ಷೆ ನಡೆಸಿ ಕಾನೂನು ಪ್ರಕಾರ ಸ್ವಾತಿ ಶವ ಹೂತು ಹಾಕಲಾಗಿತ್ತು. ಈ ಹಂತದಲ್ಲಿ ಕನಿಷ್ಠ ಜಿಲ್ಲೆಯಲ್ಲಿ ದಾಖಲಾದ ಮಿಸ್ಸಿಂಗ್ ಕಂಪ್ಲೇಂಟ್ಗಳ ಮಾಹಿತಿಯನ್ನೂ ಅವರು ಪಡೆದುಕೊಂಡಿಲ್ಲ. ಮರಣೋತ್ತರ ಪರೀಕ್ಷೆ ವೇಳೆ ಸ್ವಾತಿ ಹತ್ಯೆಯಾಗಿರುವುದು ದೃಢವಾಗಿದೆ. ಇದರ ಬೆನ್ನಲ್ಲಿಯೇ ಹಲಗೇರಿ ಪೊಲೀಸರು ತನಿಖೆ ತೀವ್ರ ಮಾಡಿದ್ದಾರೆ.
ಈ ನಡುವೆ ಹಿಂದೂ ಯುವತಿ ಹತ್ಯೆ ಜಸ್ಟೀಸ್ ಫಾರ್ ಸ್ವಾತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಲಾಗಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರಿಂದ ಸ್ವಾತಿ ಹಂತಕರನ್ನು ಪತ್ತೆ ಹಚ್ಚಿ ಆರೋಪಿಗಳಿಗೆ ಶಿಕ್ಷೆ ಕೊಡಿಸಬೇಕೆಂದು ಆಗ್ರಹ ಪಡಿಸಲಾಗಿದೆ. ಸ್ವಾತಿ ಕೊಲೆ ಆರೋಪಿಗಳಿಗೆ ಕಠೀಣ ಶಿಕ್ಷೆ ಆಗಬೇಕು. ಸ್ವಾತಿ ಹತ್ಯೆಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ರಟ್ಟಿಹಳ್ಳಿ ತಾಲೂಕು ಮಾಸೂರು ಗ್ರಾಮದ ಸ್ವಾತಿ ನಿವಾಸ ಮುಂದೆ ಸ್ಥಳಿಯರು ಪ್ರತಿಭಟನೆ ಮಾಡಿದ್ದಾರೆ.
ಇನ್ನೂ ರಾಣೇಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಹತ್ಯೆಯಾಗಿದ್ದು, ಮೂವರ ಮೇಲೆ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಲಾಗಿದ್ದು, ಬಂಧಿತನನ್ನು ನಯಾಜ್ ಎಂದು ಗುರುತಿಸಲಾಗಿದೆ.