ಬೆಳಗಾವಿ: ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಹಿಜಾಬ್ ನಿಷೇಧ ವಾಪಸ್ ತೆಗೆದುಕೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೆವು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಮ್ಮ ಸರ್ಕಾರದ ನಿಲುವನ್ನು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮುಂಚೆ ತರಗತಿಗಳಲ್ಲಿ ಹಿಜಾಬ್ ಧಾರಣೆಗೆ ಅವಕಾಶವಿತ್ತು. ಹಿಂದಿನ ಸರ್ಕಾರ ನಿಷೇಧಿಸಿತ್ತು. ನಾವು ಅದನ್ನು ಹಿಂಪಡೆಯುತ್ತೇವೆ. ಈ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ. ನಮ್ಮ ನಿರ್ಧಾರವನ್ನು ಕೋರ್ಟ್ಗೆ ಹೇಳುತ್ತೇವೆ ಎಂದರು. ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು ಹತ್ತು ಸಾವಿರ ಕೋಟಿ ರೂ. ರಸ್ತೆ ಯೋಜನೆಗಳಿವೆ. ಇದರಲ್ಲಿ ಎರಡು ಸಾವಿರ ಕೋಟಿ ರೂ. ಖರ್ಚಾಗಿದೆ. ಇನ್ನೂ ಎಂಟು ಸಾವಿರ ಕೋಟಿ ಹಣ ಖರ್ಚಾಗಬೇಕು. ಈ ಹಣವನ್ನು ಖರ್ಚು ಮಾಡದಿದ್ದರೆ ಕಾಮಗಾರಿ ಬಂದ್ ಮಾಡುತ್ತಾರೆ. ರಸ್ತೆ ಕಾಮಗಾರಿಗೆ ತೊಂದರೆ ಇರುವುದನ್ನು ಸರಿಪಡಿಸಬೇಕು. ನಿನ್ನೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದೇನೆ. ರಾಷ್ಟ್ರೀಯ ಹೆದ್ದಾರಿ ಸಲುವಾಗಿ ಚರ್ಚೆಯಾಗಿದೆ. ಸುಮಾರು 12 ವರ್ಷದಿಂದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಸ್ಥಗಿತಗೊಂಡಿವೆ. ಆರು ತಿಂಗಳಿಂದ ಈ ಎಲ್ಲ ಯೋಜನೆ ಪರಿಹರಿಸಲು ಪ್ರಯತ್ನಿಸಲಾಗಿದೆ. ನಿನ್ನೆ ಒಂದೊಂದಾಗಿ ಚರ್ಚೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಇಲ್ಲವಾದರೆ ನಾವು ಎಲ್ಲವನ್ನೂ ಕ್ಲೋಸ್ ಮಾಡುತ್ತೇವೆ ಅಂದಿದ್ದಾರೆ. ನಾವು ಮೂರು ತಿಂಗಳು ಸಮಯ ತೆಗೆದುಕೊಂಡಿದ್ದೇವೆ. ಹಣ ಇದೆ ಕಾಮಗಾರಿ ಅರ್ಧಕ್ಕೆ ನಿಂತಿವೆ. ಸಿಎಂ ಜತೆಗೆ ಸಭೆ ಮಾಡಿ ಆದಷ್ಟು ಬೇಗ ಯೋಜನೆ ಪ್ರಾರಂಭಿಸುತ್ತೇವೆ. ಪ್ರಮುಖವಾಗಿ ವಿಜಯಪುರ ಹುಬ್ಬಳ್ಳಿ ರಸ್ತೆ ಒಂದು ಪರ್ಸೆಂಟ್ ಉಳಿದಿದೆ. ಮಣ್ಣು ತೆಗೆದುಕೊಂಡು ಹೋಗಲು ಡಿಸಿಯವರು ಅನುಮತಿ ಕೊಡ್ತಿಲ್ಲ. ಅರಣ್ಯ ಇಲಾಖೆಯವರು ಕೆಲವು ತಕರಾರು ಮಾಡ್ತಿದ್ದಾರೆ. ನಿತಿನ್ ಗಡ್ಕರಿ ಅವರಿಗೆ ಆದಷ್ಟು ಬೇಗ ಕಾಮಗಾರಿ ಮುಗಿಸುತ್ತೇವೆ ಎಂದು ಮನವಿ ಮಾಡಿದ್ದೇವೆ ಎಂದರು.
ಗೋವಾ ಗಡಿಯಿಂದ ಕುಂದಾಪುರದವರೆಗೆ ರಸ್ತೆ ಮಾಡಲು ಶುರು ಮಾಡಿ 12 ವರ್ಷ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಆದಷ್ಟು ಬೇಗನೆ ಸಭೆ ಮಾಡುತ್ತೇವೆ. ಬಂದ್ ಆಗಿರುವ ಹೆದ್ದಾರಿ ಕಾಮಗಾರಿಗಳನ್ನು ಆರಂಭಿಸುತ್ತೇವೆ ಎಂದು ಹೇಳಿದ ಜಾರಕಿಹೊಳಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲಿ ಹಣ ಕೊರತೆ ಇಲ್ಲ. ಗುತ್ತಿಗೆದಾರರು ನಾವು ತಡ ಮಾಡಿದಷ್ಟು ಕೋರ್ಟ್ಗೆ ಹೋಗಿ ಹೆಚ್ಚು ಹಣ ತೆಗೆದುಕೊಂಡು ಬರ್ತಾರೆ. ಐದಾರು ಕಡೆ ಅರಣ್ಯ ಇಲಾಖೆ ಸಮಸ್ಯೆ ಇದೆ, ಐದಾರು ಕಡೆ ಡಿಸಿ ಅವರು ಅನುಮತಿ ಕೊಟ್ಟಿಲ್ಲ ಎಂದು ವಿವರಿಸಿದರು.
ರೈತರ ವಿಚಾರದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲರ ವಿವಾದಾತ್ಮಕ ಹೇಳಿಕೆ ಬಗ್ಗೆ ಮಾತನಾಡಿದ ಅವರು, ಒಮ್ಮೊಮ್ಮೆ ಗಾಡಿಗಳು ಓವರ್ ಸ್ಪೀಡ್ ಹೋಗುತ್ತವೆ. ಆಗ ಆ್ಯಕ್ಸಿಡೆಂಟ್ ಆಗುತ್ತವೆ, ಎಲ್ಲ ಪಕ್ಷಗಳಲ್ಲೂ ಇದು ಸಾಮಾನ್ಯ. ಶಿವಾನಂದ ಪಾಟೀಲರು ಏನೋ ಹೇಳಲು ಹೋಗಿದ್ದಾರೆ. ಒಮ್ಮೊಮ್ಮೆ ಯಡವಟ್ಟು ಆಗುತ್ತದೆ. ಬರಗಾಲ ಬರಲಿ ಎಂದು ಯಾರೂ ಬಯಸಲ್ಲ. ಬರಗಾಲ ಬಂದ್ರೆ ರೈತ ಅಷ್ಟೇ ಅಲ್ಲ, ಗ್ರಾಹಕರು, ವ್ಯಾಪಾರಿಗಳ ಮೇಲೂ ಪರಿಣಾಮವಿದೆ. ದೇಶದ ಜಿಡಿಪಿ ಮೇಲೂ ದೊಡ್ಡ ಪ್ರಮಾಣದಲ್ಲಿ ಎಫೆಕ್ಟ್ ಆಗುತ್ತದೆ. ಮಳೆಗಾಲ ಬಂದ್ರೆ ಯಾವುದೇ ಸಮಸ್ಯೆ ಆಗಲ್ಲ, ಬರ ಬಂದ್ರೆ ಸಮಸ್ಯೆ ಆಗುತ್ತದೆ. ಶಿವಾನಂದ ಪಾಟೀಲ ಹಿರಿಯ ಸಚಿವರಿದ್ದಾರೆ, ಅವರಿಗೆ ನಾನೇನೂ ಹೇಳಲ್ಲ ಎಂದರು.
ಮುಸ್ಲಿಂ ಮಹಿಳೆಯರ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಹೇಳಿಕೆ ವಿರುದ್ಧ ಸರ್ಕಾರ ಸ್ವಯಂಪ್ರೇರಿತ ದೂರು ದಾಖಲಿಸುತ್ತದಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ, ಸರ್ಕಾರವೇ ಸ್ವಯಂಪ್ರೇರಿತವಾಗಿ ದೂರು ದಾಖಲಿಸಬೇಕು ಎಂದೇನೂ ಇಲ್ಲ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಮುಸ್ಲಿಂ ಸಮುದಾಯದವೇ ದೂರು ದಾಖಲಿಸಬೇಕು ಎಂದ ಸತೀಶ್ ಜಾರಕಿಹೊಳಿ ಹೇಳಿದರು.