ಬೆಂಗಳೂರು:- ಬೆಂಗಳೂರು ಮಹಾನಗರದಲ್ಲಿನ ಕೆಲವು ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಬೇಕು’ ಎಂದು ಕೋರಿದ್ದ ಮನವಿಗೆ ಸ್ಪಂದಿಸಲು ಹೈಕೋರ್ಟ್ ನಿರಾಕರಿಸಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಆರ್.ನಟರಾಜ್ ನೇತೃತ್ವದ ರಜಾಕಾಲದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಎನ್.ಪಿ. ಅಮೃತೇಶ್, ‘ಬೆಂಗಳೂರಿನ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಶಿಯಲ್ ಸ್ರ್ಟೀಟ್ ಹಾಗೂ ಇತರೆಡೆ ಹೊಸ ವರ್ಷಾಚರಣೆಗೆ ಹೆಚ್ಚಿನ ಜನ ಸೇರುವುದನ್ನು ತಡೆಯಬೇಕಿದೆ. ಮುಂಜಾಗ್ರತಾ ಕ್ರಮವಾಗಿ ಹೊಸ ವರ್ಷಾಚರಣೆ ನಿರ್ಬಂಧಿಸುವಂತೆ ನಿರ್ದೇಶಿಸಬೇಕು’ ಎಂದು ಕೋರಿದರು.
ಇದಕ್ಕೆ ಉತ್ತರಿಸಿದ ಸರ್ಕಾರದ ಪರ ವಕೀಲರು, ‘ಸರ್ಕಾರ ಈ ನಿಟ್ಟಿನಲ್ಲಿ ಈಗಾಗಲೇ ಸರಣಿ ಸಭೆ ನಡೆಸಿದೆ. ಇನ್ನೂ ಆಖೈರು ತೀರ್ಮಾನ ಕೈಗೊಂಡಿಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಕಾನೂನು ಶಾಂತಿ ಪಾಲನೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲು ಸಿದ್ಧವಿದೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಒಂದು ವೇಳೆ ಬೆಂಗಳೂರಿನಲ್ಲಿ ನಿರ್ಬಂಧಿಸಿದರೆ ಸಂಭ್ರಮಿಸುವ ಜನರು ಹೊರ ಪ್ರದೇಶಗಳಿಗೆ ತೆರಳುತ್ತಾರೆ. ಸರ್ಕಾರ ಈ ಬಗ್ಗೆ ಯಾವುದೇ ನಿಯಂತ್ರಣಗಳನ್ನು ವಿಧಿಸಿಲ್ಲ. ಆದಾಗ್ಯೂ, ಸದ್ಯಕ್ಕೆ ಕೋವಿಡ್ ಗೆ ಹೆದರಬೇಕಾದ ಪ್ರಮೇಯ ಕಾಣುತ್ತಿಲ್ಲ’ ಎಂಬ ಅಭಿಪ್ರಾಯಪಟ್ಟಿದೆ.