ಬೆಂಗಳೂರು:– ಬಿಜೆಪಿ ಶಾಸಕ ಸುನೀಲ್ ಕುಮಾರ್ ವಿರುದ್ಧದ ಮಾನನಷ್ಟ ಕೇಸ್ ರದ್ದತಿಗೆ ಹೈಕೋರ್ಟ್ ನಕಾರ ಎಂದಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಭಾಷಣ ಮಾಡುವಾಗ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ. ಸುನೀಲ್ ಕುಮಾರ್ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಸುನೀಲ್ ಕುಮಾರ್ ಮಾನಹಾನಿಕರ ಹೇಳಿಕೆ ನೀಡಿದ್ದಾರೆಂದು ಪ್ರಮೋದ್ ಮುತಾಲಿಕ್ ದೂರು ಸಲ್ಲಿಸಿದ್ದರು. ತಮ್ಮ ವಿರುದ್ಧದ ಮಾನನಷ್ಟ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಶಾಸಕ ಸುನಿಲ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ತಮ್ಮ ವಿರುದ್ಧದ ಮಾನನಷ್ಟ ಹೇಳಿಕೆಯ ವಿರುದ್ಧ ಪ್ರಮೋದ್ ಮುತಾಲಿಕ್ ಅವರು ಜನಪ್ರತಿನಿಧಿಗಳ ವಿಶೇಷ ಕೋರ್ಟ್ಗೆ ಖಾಸಗಿ ದೂರು ಸಲ್ಲಿಸಿದ್ದರು. ಚುನಾವಣೆ ವೇಳೆ ಕೆಸರೆರಚಾಟ ನಡೆಸುವುದು ನಿಲ್ಲಬೇಕು. ಚುನಾವಣೆ ವೇಳೆ ಒಬ್ಬರ ವಿರುದ್ಧ ಮತ್ತೊಬ್ಬರು ಆರೋಪ ಮಾಡುತ್ತಾರೆ. ಪಕ್ಷ ಅಥವಾ ಸರ್ಕಾರಗಳು ಮಾಡಿದ ಕೆಲಸದ ಆಧಾರದಲ್ಲಿ ನಡೆಯುತ್ತಿಲ್ಲ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.