ಬೆಂಗಳೂರು: ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಮರು ಪರೀಕ್ಷೆಗೆ ಆದೇಶಿಸಿ ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರ (State Government) ಹೊರಡಿಸಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ (Karnataka High court) ಗ್ರೀನ್ ಸಿಗ್ನಲ್ ನೀಡಿದೆ.
ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋಟ್ ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಲು ಸೂಚನೆ ನೀಡಿದೆ. ಸರ್ಕಾರದ ಆದೇಶವನ್ನ ಎತ್ತಿಹಿಡಿದೆ. ಮರುಪರೀಕ್ಷೆ ನಡೆಸದಂತೆ ಕೋರ್ಟ್ ಮೊರೆಹೋಗಿದ್ದ ಅಭ್ಯರ್ಥಿಳಿಗೆ ನಿರಾಸೆಯಾಗಿದೆ.
ಅಂದರೆ 545 ಪಿಎಸ್ಐಗಳ ನೇಮಕಾತಿಗಾಗಿ ನಡೆದ ಪರೀಕ್ಷೆ ಮತ್ತು ಬಳಿಕ ಪ್ರಕಟಿಸಿದ ನೇಮಕಾತಿ ಪಟ್ಟಿಯನ್ನು ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಲು ಹೈಕೋರ್ಟ್ ಅವಕಾಶ ಮಾಡಿಕೊಟ್ಟಿದೆ.
ನ್ಯಾಯಮೂರ್ತಿಗಳಾದ ಪಿ ಎಸ್ ದಿನೇಶ್ ಕುಮಾರ್ ಮತ್ತು ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಈ ಮಹತ್ವದ ಆದೇಶವನ್ನು ಹೊರಡಿಸಿದೆ. ಇದು ಮರುಪರೀಕ್ಷೆ ಬೇಡ, ಕಳಂಕಿತರನ್ನು ಹೊರತುಪಡಿಸಿ ನೇಮಕಾತಿ ಪಟ್ಟಿಯನ್ನು ಪ್ರಕಟಿಸಲು ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಿದ್ದ ಅಭ್ಯರ್ಥಿಗಳ ಪರ ದಾವೆಯನ್ನು ತಿರಸ್ಕರಿಸಲಾಗಿದೆ.
ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರುಪರೀಕ್ಷೆ ನಡೆಸಲು ಬಿಜೆಪಿ ನೇತೃತ್ವದ ಸರ್ಕಾರ ಆದೇಶ ಹೊರಡಿಸಿತ್ತು. ಈ ಆದೇಶವನ್ನು ರದ್ದುಪಡಿಸಬೇಕು. ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳನ್ನು ಪ್ರತ್ಯೇಕಿಸಿ, ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಯ್ಕೆಯಾಗಿದ್ದ ನೂರಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಒಂದು ಹಂತದಲ್ಲಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಹೈಕೋರ್ಟ್ ಎಲ್ಲ ಅರ್ಜಿಗಳ ವಿಚಾರಣೆಯನ್ನು ನಡೆಸಿತ್ತು. ಕೆಲವು ದಿನಗಳ ಹಿಂದೆ ವಿಚಾರಣೆಯನ್ನು ಪೂರ್ಣಗೊಳಿಸಿ, ತೀರ್ಪನ್ನು ನವೆಂಬರ್ 10ಕ್ಕೆ ನಿಗದಿ ಮಾಡಿತ್ತು.
ಏನಿದು ವಿವಾದ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2021ರ ಅಕ್ಟೋಬರ್ ಮೂರರಂದು ಪಿಎಸ್ಐ ನೇಮಕಾತಿ ಪ್ರವೇಶ ಪರೀಕ್ಷೆಯನ್ನು ನಡೆಸಿತ್ತು. ಒಟ್ಟು 545 ಹುದ್ದೆಗಳಿಗಾಗಿ ಲಕ್ಷಾಂತರ ಜನ ಪರೀಕ್ಷೆ ಬರೆದಿದ್ದರು. ಈ ಪರೀಕ್ಷೆಯಲ್ಲಿ ದೊಡ್ಡ ಮಟ್ಟದ ಅಕ್ರಮ ನಡೆದಿರುವುದು ಬೆಳಕಿಗೆ ಬಂದ ಬಳಿಕ 52 ಮಂದಿ ಅಭ್ಯರ್ಥಿಗಳು ಇದರಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿತ್ತು. ಈ ಪ್ರಕರಣದಲ್ಲಿ ಹಲವರ ಬಂಧನವಾಗಿದೆ ಮತ್ತು ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ 52 ಮಂದಿಯನ್ನು ಇನ್ನು ಯಾವುದೇ ಪೊಲೀಸ್ ಪರೀಕ್ಷೆಗೆ ಹಾಜರಾಗದಂತೆ ಶಾಶ್ವತವಾಗಿ ನಿರ್ಬಂಧಿಸಲಾಗಿದೆ. ಈ ನಡುವೆ ಅಕ್ರಮ ಎಸಗಿದವರನ್ನು ಹೊರತುಪಡಿಸಿ ಉಳಿದವರ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಂತೆ ಅಭ್ಯರ್ಥಿಗಳು ಆಗ್ರಹಿಸಿದ್ದರು. ಆದರೆ, ಸರ್ಕಾರ ಮರುಪರೀಕ್ಷೆಗೆ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೊಕ್ಕಿದ್ದರು.