ಹುಬ್ಬಳ್ಳಿ: ಹೆಸ್ಕಾಂ ವ್ಯಾಪ್ತಿಯಲ್ಲಿ ರೈತರಿಗೆ ಸೋಲಾರ್ ಪಂಪ್ ಸೆಟ್ ಸೌಲಭ್ಯ ಕಲ್ಪಿಸುವ ಕುಸುಮ್-ಬಿ ಯೋಜನೆ ಅನುಷ್ಠಾನ ತ್ವರಿತಗೊಂಡಿದ್ದು, ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್. ಅವರು ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಹಾಗೂ ಪಾಳೆ ಗ್ರಾಮದ ʼಪಿಎಂ ಕುಸುಮ್ ಬಿʼ ಫಲಾನುಭವಿ ರೈತರ ಜಮೀನುಗಳಿಗೆ ಭೇಟಿ ನೀಡಿ ಯೋಜನೆ ಕುರಿತಂತೆ ಪರಿಶೀಲನೆ ನಡೆಸಿದರು.
ಕೃಷಿ ನೀರಾವರಿಗೆ ಸಾಂಪ್ರದಾಯಿಕ ಇಂಧನ ಬದಲು ಸೌರಶಕ್ತಿ ಬಳಸುವ ಮೂಲಕ ಇಂಧನ ಸ್ವಾಲಂಬನೆ ಸಾಧಿಸುವ ನಿಟ್ಟಿನಲ್ಲಿ ಕುಸುಮ್- ಬಿ ಯೋಜನೆಯಡಿ ಅದರಗುಂಚಿ ಗ್ರಾಮದ ಭಾರ್ಗವ್ ಕೃಷ್ಣಾಜಿ ಕಲಾಲ್ ಹಾಗೂ ಪಾಳೆ ಗ್ರಾಮದ ಮಹಾದೇವಪ್ಪ ಸಿದ್ದಪ್ಪ ಪಶುಪತಿಹಾಳ ಅವರ ಜಮೀನುಗಳಲ್ಲಿ 5 ಎಚ್.ಪಿ. ಸಾಮರ್ಥ್ಯದ ಸೋಲಾರ್ ಪಂಪ್ಸೆಟ್ಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಹೆಸ್ಕಾಂ ಅಧಿಕಾರಿಗಳ ಜತೆ ಸ್ಥಳಕ್ಕೆ ಭೇಟಿ ನೀಡಿದ ವ್ಯವಸ್ಥಾಪಕ ನಿರ್ದೇಶಕರು, ಸೋಲಾರ್ ಪಂಪ್ಸೆಟ್ಗಳ ಕಾರ್ಯನಿರ್ವಹಣೆ ಬಗ್ಗೆ ಸ್ವತಃ ರೈತರಿಂದಲೇ ಮಾಹಿತಿ ಪಡೆದರು.
100, 200, 500 ರೂಪಾಯಿಗಳ ನೋಟು ಅಸಲಿಯೋ? ನಕಲಿಯೋ? ಪತ್ತೆ ಹಚ್ಚುವ ವಿಧಾನಗಳು ಇಲ್ಲಿದೆ ನೋಡಿ
ಸೋಲಾರ್ ಪಂಪ್ಸೆಟ್ ರೈತರಿಗೆ ತುಂಬಾ ಅನುಕೂಲವಾಗಿದೆ. ಪ್ರತಿ ದಿನ ಬೆಳಗ್ಗೆ 7.30 ರಿಂದ ಸಂಜೆ 5 ಗಂಟೆವರೆಗೆ ನಿರಂತರವಾಗಿ ಪಂಪ್ ಸೆಟ್ ಗಳು ಕಾರ್ಯನಿರ್ವಹಿಸುವುದರಿಂದ ಕೃಷಿಗೆ ಸಾಕಷ್ಟು ನೀರು ಪಡೆಯಬಹುದು. ಮಳೆ-ಮೋಡದ ಸಂದರ್ಭದಲ್ಲಿಯೂ ಈ ಪಂಪ್ಸೆಟ್ಗಳು ಕಾರ್ಯನಿರ್ವಹಿಸುತ್ತವೆ. ದಿನದ 8 ರಿಂದ 9 ಗಂಟೆಗಳ ಕಾಲ ನಮಗೆ ನೀರು ಸಿಗುತ್ತಿದೆ. ಇದರಿಂದ ರಾತ್ರಿ ಹೊತ್ತಿನಲ್ಲಿ ಜಮೀನುಗಳಿಗೆ ತೆರಳಿ ನೀರು ಹಾಯಿಸುವ ಕೆಲಸ ತಪ್ಪಿದೆ ಎಂದು ಪಾಳೆ ಗ್ರಾಮದ ಕುಸುಮ್ ಬಿ ಫಲಾನುಭವಿ ರೈತ ಮಹಾದೇವಪ್ಪ ಸಿದ್ದಪ್ಪ ಪಶುಪತಿಹಾಳ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರ ತಾಂತ್ರಿಕ ಸಹಾಯಕ ಎಂ.ಬಿ ಸುಣಗಾರ, ಹುಬ್ಬಳ್ಳಿ ಗ್ರಾಮೀಣ ಉಪವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕಿರಣ್ ಕುಮಾರ್ ಬಿ, ಕುಸುಮ್ ಬಿ ಯೋಜನೆಯ ಫಲಾನುಭವಿ ರೈತರಾದ ಭಾರ್ಗವ್ ಕೃಷ್ಣಾಜಿ ಕಲಾಲ್, ಮಹಾದೇವಪ್ಪ ಸಿದ್ದಪ್ಪ ಪಶುಪತಿಹಾಳ ಸೇರಿದಂತೆ ಹಲವರು ಹಾಜರಿದ್ದರು.