ಸೌತ್ ಇಂಡಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಮಿಂಚಿದ್ದ ನಟಿ ಕಾಶಿಮಾ ರಫಿ (Kashima Rafi) ಇದೀಗ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರಾಜೇಶ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಕೂಡ ಶುರುವಾಗಿದೆ.
ಕಾಶಿಮಾ ರಫಿ ಅವರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಬಹುದಿನಗಳ ಆಸೆಯಂತೆ. ಈ ಸಿನಿಮಾದ ಮೂಲಕ ಅದು ಈಡೇರಿದೆ. ಇಷ್ಟು ಬೇಗ ಇಂಥದ್ದೊಂದು ಅವಕಾಶ ನನಗೆ ಬರುತ್ತದೆ ಎಂದು ನಂಬಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
ಈ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಟೈಟಲ್ ಇಡದೇ ಸಿನಿಮಾದ ಚಿತ್ರೀಕರಣವನ್ನು ಶುರು ಮಾಡಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ಕಾಶಿಮಾ ಎರಡು ಶೇಡ್ ಇರುವಂತಹ ಪಾತ್ರವನ್ನು ಮಾಡುತ್ತಿದ್ದಾರಂತೆ. ಒಂದು ಮಹಾರಾಣಿ ಲುಕ್ ಆಗಿದ್ದರೆ, ಮತ್ತೊಂದು ಪುರಾತತ್ವಶಾಸ್ತ್ರಜ್ಞೆಯ ಪಾತ್ರವಂತೆ.
ಈ ಸಿನಿಮಾದಲ್ಲಿ ಸಾಹಸ ಪ್ರಧಾನ ದೃಶ್ಯಗಳಿದ್ದು, ಅದಕ್ಕಾಗಿ ಅವರು ಫೈಟ್ ಕೂಡ ಕಲಿಯುತ್ತಿದ್ದಾರಂತೆ. ಜೊತೆಗೆ ಮತ್ತೊಂದು ಸಿನಿಮಾಗೂ ಅವರು ಸಹಿ ಮಾಡಿದ್ದು, ಆ ವಿಷಯವನ್ನು ಮತ್ತೆ ಹೇಳುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ವೆಬ್ ಸರಣಿಯಲ್ಲಿ ನಟಿಸಲೂ ಇವರಿಗೆ ಆಫರ್ ಬಂದಿದೆಯಂತೆ.