ನಮ್ಮ ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ಒತ್ತಡ, ಹೊರಗಡೆಯ ಆಹಾರ, ಎಣ್ಣೆಯುಕ್ತ ಆಹಾರ ಹಾಗೂ ಕಡಿಮೆ ನೀರು ಸೇವನೆ ಸೇರಿದಂತೆ ಒಂದೇ ಕಡೆ ಕುಳಿತು ಗಂಟೆಗಟ್ಟಲೆ ನಾವು ಕೆಲಸ ಮಾಡೋದು ಕೂಡ ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ. ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇರುವುದೇ ಇದಕ್ಕೆ ಕಾರಣ.
ಗ್ಯಾಸ್ಟ್ರಿಕ್ ಎಂದ ತಕ್ಷಣ ನಾವು ವೈದ್ಯರ ಬಳಿ ಹೋಗ್ತೇವೆ. ಅವರು ನೀಡುವ ಮಾತ್ರೆಯನ್ನು ಒಂದಾದ್ಮೇಲೆ ಒಂದರಂತೆ ತೆಗೆದುಕೊಳ್ತೇವೆ. ಇದ್ರಿಂದ ಗ್ಯಾಸ್ಟ್ರಿಕ್ ತಾತ್ಕಾಲಿಕವಾಗಿ ಕಡಿಮೆಯಾಗಿದೆ ಎನ್ನಿಸಿದ್ರೂ ಅದ್ರ ಬೇರು ಹೋಗಿರೋದಿಲ್ಲ. ನಿಮಗೂ ಗ್ಯಾಸ್ ಸಮಸ್ಯೆ ಇದ್ರೆ ನೀವು ಮನೆಯಲ್ಲಿರುವ ಆಹಾರವನ್ನೇ ಬಳಸಿ ಇದ್ರಿಂದ ಮುಕ್ತಿಪಡೆಯಬಹುದು.
ಅಜವಾನ/ಓಮು ಕಾಳಿನಿಂದ ಅನೇಕ ಸಮಸ್ಯೆ ದೂರ : ಕಳಪೆ ಆಹಾರ ಹಾಗೂ ಜೀವನಶೈಲಿಯಿಂದ ಹೆಚ್ಚಿನ ಮಂದಿ ಗ್ಯಾಸ್ ಎಸಿಡಿಟಿ, ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ಯಾಸ್ ಸಮಸ್ಯೆಯಿಂದ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ಅಜೀರ್ಣ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಹೀಗಾದಾಗ ಸುಲಭವಾಗಿ ಕೈಗೆ ಸಿಗುವಂತ ಮಾತ್ರೆಗಳನ್ನು ನುಂಗಿಬಿಡುತ್ತಾರೆ. ಇದರ ಬದಲು ನಮ್ಮ ಅಡುಗೆಮನೆಯಲ್ಲೇ ಇರುವ ಅಜವಾನ ಅಥವಾ ಓಮು ಕಾಳನ್ನು ಸೇವಿಸಿದರೆ ಇಂತಹ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.
ಆಯುರ್ವೇದದಲ್ಲಿ ಅನೇಕ ಔಷಧಗಳಿಗೆ ಬಳಕೆಯಾಗುವ ಅಜವಾನದಲ್ಲಿ ಥೈಮೋಲ್ ಎಂಬ ತೈಲದ ಅಂಶವಿದೆ. ಥೈಮೋಲ್ ಎಂಬ ತೈಲದ ಅಂಶವು ಆರೋಗ್ಯಕ್ಕೆ ಬಹಳ ಉಪಯುಕ್ತವಾಗಿದೆ. ಹೆಚ್ಚಿನ ಆಹಾರ ಸೇವಿಸಿದಾಗ ಗ್ಯಾಸ್, ಎಸಿಡಿಟಿ ಸಮಸ್ಯೆ ಹಾಗೂ ಹೊಟ್ಟೆ ಭಾರವೆನಿಸುತ್ತದೆ. ಇಂತಹ ಸಮಯದಲ್ಲಿ 1 ಚಮಚ ಅಜವಾನ ಸೇವಿಸಿದರೆ ತಕ್ಷಣವೇ ಆರಾಮ ಸಿಗುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ಓಮು ಕಾಳು ತಿಂದರೆ ಇಡೀ ದಿನ ಗ್ಯಾಸ, ಎಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಅಜವಾನದ ಜೊತೆ ಕಪ್ಪು ಉಪ್ಪು ಸೇರಿಸಿ ಕೂಡ ತಿನ್ನಬಹುದು. ಇದರ ಹೊರತಾಗಿ ಬೆಳಿಗ್ಗೆ ಎದ್ದೊಡನೆ ಓಮು ಕಾಳು ನೀರನ್ನು ಕೂಡ ಕುಡಿಯಬಹುದು. ಇದರಿಂದ ಎಸಿಡಿಟಿ ಅಥವಾ ಗ್ಯಾಸ್ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ.