ಬರೋಬ್ಬರಿ ಮೂರು ತಿಂಗಳ ಕಾಲ ಇರುವ ಬೇಸಿಗೆಯಿಂದ ನಮ್ಮ ದೇಹ, ಚರ್ಮ, ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಕಷ್ಟ. ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಆರೋಗ್ಯದಲ್ಲೂ ಏರುಪೇರಾಗುತ್ತೆ. ಅದೇ ರೀತಿ ದೇಹ ಕೂಡ ಸುಡಲಾರಂಭಿಸುತ್ತೆ. ಮುಖದಲ್ಲಿ ಮೊಡವೆ, ದೇಹವೆಲ್ಲಾ ಬೆಂಕಿಯಲ್ಲಿ ಸುಡುವಂತಹ ಅನುಭವ, ಚರ್ಮ ಕಾಂತಿ ಕಳೆದುಕೊಳ್ಳುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಆರೋಗ್ಯ ಮತ್ತು ಚರ್ಮದ ರಕ್ಷಣೆ ಮೇಲೆ ಹೆಚ್ಚಿನ ಗಮನ ಇಡಬೇಕು. ಕೆಲವರದು ಎಣ್ಣೆಯುಕ್ತ ಚರ್ಮ ಇರುತ್ತೆ, ಮತ್ತೆ ಕೆಲವರದು ಒಣ ಚರ್ಮ ಹೀಗಾಗಿ ನಮ್ಮ ಚರ್ಮದ ಪ್ರಕಾರವನ್ನು ತಿಳಿದುಕೊಂಡು ನಂತರ ಚರ್ಮದ ಆರೈಕೆ ಮಾಡುವುದು ಉತ್ತಮ ಎಂದು ಚರ್ಮರೋಗ ತಜ್ಞರು ಹೇಳುತ್ತಾರೆ.
ಆರ್ ಟಿ ನಗರದಲ್ಲಿ ಬೆಂಕಿ ಅವಘಡ – 60 ಜನ ಕೆಲಸಗಾರರು ಸಿಲುಕಿರುವ ಶಂಕೆ!
ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪ್ರಕಾರ, ಬೇಸಿಗೆಯಲ್ಲಿ ನಮ್ಮ ಚರ್ಮವು ಒಡೆಯುತ್ತದೆ, ಕಿರಿಕಿರಿಯಾಗುತ್ತದೆ ಮತ್ತು ರ್ಯಾಷಸ್ಗಳು ಕೂಡ ಆಗುತ್ತವೆ. ಬೇಸಿಗೆಯಲ್ಲಿ ಹೆಚ್ಚು ಬೆವರುವುದರಿಂದ ಬ್ಯಾಕ್ಟೀರಿಯಾ ಮತ್ತು ಫಂಗಲ್ ಇನ್ಫೆಕ್ಷನ್ ಮತ್ತು ರ್ಯಾಷಸ್ಗಳು ಹೆಚ್ಚಾಗಿ ಕಂಡುಬರುತ್ತವೆ.
ಮೊದಲಿಗೆ ಚರ್ಮವು ಮೂರು ಪದರಗಳಿಂದ ಆಗಿವೆ. ನಾವು ಯಾವಾಗ ಹೆಚ್ಚಾಗಿ ಬಿಸಿಲಲ್ಲಿ ಓಡಾಡುವುದು, ಬಿಸಿಲಿಗೆ ಮೈವೊಡ್ಡುವುದನ್ನು ಮಾಡುತ್ತೇವೋ ಆಗ ಸೂರ್ಯನಿಂದ ಬರುವ ಯುವಿ ಕಿರಣಗಳು ವೇಗವಾಗಿ ನಮ್ಮ ಚರ್ಮದ ಮೇಲೆ ಬೀಳುತ್ತೆ. ಆಗ ಚರ್ಮದ ಮೊದಲ ಪದರ ಪಿಗ್ಮಂಟೇಷನ್ಗೆ ಒಳಗಾಗುತ್ತೆ. ಇದರಿಂದ ಮುಖದ ಮೇಲೆ ಕಪ್ಪು ಕಲೆಗಳು, ಮೊಡವೆಗಳು, ಕೆರೆತ ಹಾಗೂ ಚರ್ಮದ ಪದರ ಸೀಳಿಕೊಂಡು ಬರುವ ಅನುಭವವಾಗುತ್ತೆ. ಇದಾದ ನಂತರ ಬಿಸಿಲಿನಿಂದ ಚರ್ಮವು ಟ್ಯಾನ್ ಆಗುತ್ತೆ, ಚರ್ಮ ಕಂದು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಚರ್ಮ ಕಾಂತಿಯನ್ನು ಕಳೆದುಕೊಳ್ಳುತ್ತದೆ. ತುಂಬಾ ಸೂಕ್ಷ್ಮ ಚರ್ಮ ಉಳ್ಳವರು ಬೇಸಿಗೆ ಸಮಯದಲ್ಲಿ ಆನೇಕ ಆರೋಗ್ಯ ಸಮಸ್ಯೆಗಳಿಗೂ ಒಳಗಾಗುತ್ತಾರೆ. ಮತ್ತೊಂದೆಡೆ ಸೂರ್ಯನ ಕಿರಣಗಳು ಚರ್ಮದ 2ನೇ ಪದರಕ್ಕೆ ಹಾನಿಯುಂಟು ಮಾಡಿದರೆ ಚರ್ಮದ ರೋಗಗಳು ಬರುತ್ತವೆ.
ಬೇಸಿಗೆಯ ಶಾಖವು ನಮ್ಮ ಚರ್ಮವನ್ನು ಡಿ ಹೈಡ್ರೇಟ್ ಮಾಡುತ್ತದೆ. ಇದರಿಂದ ತ್ವಚೆಗೂ ನಮ್ಮ ದೇಹದ ಬಣ್ಣಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಆದ್ದರಿಂದ ಸಾಕಷ್ಟು ನೀರು ಸೇವನೆ, ನೀರು ಭರಿತ ಹಣ್ಣುಗಳು, ತರಕಾರಿಗಳು, ಕಲ್ಲಂಗಡಿ, ಸೌತೆಕಾಯಿ, ಎಳನೀರು ಸೇವನೆ ಅಭ್ಯಸ ಮಾಡಿಕೊಳ್ಳಬೇಕು. ಜೊತೆಗೆ ನಿಮ್ಮ ಚರ್ಮವನ್ನು ಸ್ವಚ್ಛವಾಗಿ ಸ್ಕ್ರಬ್ ಮಾಡುವುದರಿಂದ ತ್ವಚೆಯ ಮೇಲಿನ ರಕ್ತಪರಿಚಲನೆ ಹೆಚ್ಚುತ್ತದೆ. ಆದರೆ ಅತಿಯಾಗಿ ಸ್ಕ್ರಬ್ ಮಾಡುವುದು ಕೂಡ ಅಪಾಯಕಾರಿ. ಏಕೆಂದರೆ ಅತಿಯಾದ ಸ್ಕ್ರಬ್ ಮಾಡುವುದು ಚರ್ಮದ ಹಾನಿಗೂ ಕಾರಣವಾಗುತ್ತೆ. ಸುಕ್ಕುಗಟ್ಟುವಿಕೆಯನ್ನು ವೇಗಗೊಳಿಸುತ್ತದೆ.
ನಾವು ಎಷ್ಟೇ ಬಿಜಿ ಇದ್ದರೂ ನಮ್ಮ ಚರ್ಮದ ಆರೈಕೆಗೆಂದು ಒಂದಷ್ಟು ಸಮಯ ಮೀಸಲಿಡಬೇಕು. ಮನೆಯಲ್ಲೇ ಸಿಗುವ ಆಲೂಗಡ್ಡೆ, ಪಪ್ಪಾಯ, ನಿಂಬೆ, ಅಕ್ಕಿ ಹಿಟ್ಟು, ಟೊಮೆಟೊ, ಮಾರುಕಟ್ಟೆಯಲ್ಲಿ ಸಿಗುವ ಪೇಸ್ ಪ್ಯಾಕ್ಗಳನ್ನು ಬಳಸಿ ತ್ವಚೆಯನ್ನು ಕಾಪಾಡಿಕೊಳ್ಳಬೇಕು.
ಸಾಮಾನ್ಯವಾಗಿ ಸೂರ್ಯನ ಹಾನಿಕಾರಕ UVA, UVB ಕಿರಣಗಳು ನಮ್ಮ ಚರ್ಮವನ್ನು ಟ್ಯಾನ್ ಮಾಡುತ್ತವೆ. ಹೀಗಾಗಿ ಮನೆಯಿಂದ ಆಚೆ ಕಾಲಿಡುವಾಗ ಸನ್ ಸ್ಕ್ರೀನ್, ಲೋಷನ್, ಮಾಯಿಶ್ಚರೈಸರ್ ಬಳಸಿ. ಹಾನಿಕಾರಕ ಮೇಕಪ್ ಬಳಕೆ ಬೇಡ. ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಮುಖ ತೊಳೆಯಿರಿ. ಪ್ರತಿ ದಿನ ಸ್ನಾನ ಕಡ್ಡಾಯ. ತೆಳುವಾದ ಬಟ್ಟೆ ಧರಿಸಿ, ಜೀನ್ಸ್ ಬಿಟ್ಟು ಕಾಟನ್ ಬಟ್ಟೆ ಧರಿಸುವುದು ಒಳ್ಳೆಯದು ಹಾಗೂ ಕಪ್ಪು ಬಟ್ಟೆಯಿಂದ ದೂರ ಇರಿ. ಆರೋಗ್ಯಕರವಾದ ಆಹಾರ ಸೇವಿಸಿ, ವಿಟಮಿನ್ ಸಿ ಇರುವ ಮಾಯಿಶ್ಚರೈಸರ್ಗಳು ಅಥವಾ ಸೀರಮ್ಗಳನ್ನು ಬಳಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಹಾರ್ವರ್ಡ್ ಮೆಡಿಕಲ್ ಸ್ಕೂಲ್ ಪ್ರಕಾರ, ಸನ್ಸ್ಕ್ರೀನ್ ಜೊತೆಗೆ ವಿಟಮಿನ್ ಸಿ ಸೀರಮ್ ಅನ್ನು ಬಳಸುವುದು ಬೇಸಿಗೆಯಲ್ಲಿ ಚರ್ಮದ ಆರೈಕೆಗೆ ಅತ್ಯಗತ್ಯ ಏಕೆಂದರೆ ಇದು ಪಿಗ್ಮೆಂಟೇಶನ್ ಮತ್ತು ಮೊಡವೆ ಕಲೆಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದರಿಂದ ಹೊಳೆಯುವ ಕಾಂತಿಯುತ ಚರ್ಮ ನಿಮ್ಮದಾಗುತ್ತದೆ.
ಅಲೋವೆರಾ: ಸಂಶೋಧನೆಯ ಪ್ರಕಾರ, ಅಲೋವೆರಾ ಜೆಲ್ ಚರ್ಮದ ಆರೈಕೆಗೆ ಬೇಕಾಗುವ ಗುಣಗಳನ್ನು ಹೊಂದಿದೆ. ಇದು ಚರ್ಮದ ತೇವಾಂಶವನ್ನು ಹೆಚ್ಚಿಸಲು ಮತ್ತು ಚರ್ಮದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ಮುಖದಲ್ಲಿ ಮೊಡವೆ ಹೆಚ್ಚಿದ್ದರೆ, ಮುಖದಲ್ಲಿ ಉರಿಯುವ ಲಕ್ಷಣಗಳು ಕಂಡು ಬಂದರೆ ನಿಮ್ಮ ಮನೆ ಗಾರ್ಡನ್ನಲ್ಲೇ ಇರುವ ಅಲೋವೆರಾವನ್ನು ಕತ್ತರಿಸಿ ತಂದು ತೊಳೆದು ಅದರ ಸಿಪ್ಪೆ ತೆಗೆದು ಜೆಲ್ ಅನ್ನು ಮುಖಕ್ಕೆ ಹಚ್ಚಿ, ಅಲ್ಲದೆ ಇದು ಕೂದಲಿಗೂ ದೇಹಕ್ಕೂ ಹಚ್ಚಬಹುದು
ಜೇನು ಮೊಸರು ಫೇಸ್ ಮಾಸ್ಕ್: ನೀವು ವಾರಕ್ಕೆ ಎರಡು ಬಾರಿ ಜೇನು ಮೊಸರು ಫೇಸ್ ಮಾಸ್ಕ್ ಅನ್ನು ಬಳಸುವುದರಿಂದ ಬೇಸಿಗೆಯಿಂದ ಕಳೆದುಕೊಂಡಿದ್ದ ಕಾಂತಿ ಮತ್ತೆ ಸಿಗುತ್ತದೆ. ಜೇನುತುಪ್ಪವು ಆಂಟಿಮೈಕ್ರೊಬಿಯಲ್ ಹೊಂದಿದೆ ಮತ್ತು ಇದು ಬಿಸಿಲಿನ ಬೇಗೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ತ್ವಚೆಯನ್ನು ಹೈಡ್ರೇಟ್ ಆಗಿ ಇಡುತ್ತದೆ. ಫೇಸ್ ಮಾಸ್ಕ್ಗಳಲ್ಲಿ ಮೊಸರನ್ನು ಬಳಸುವುದರಿಂದ ಹೊಳಪು ಹೆಚ್ಚುತ್ತದೆ.
ಪ್ರತಿ ದಿನ ಅಡುಗೆಗೆ ಬಳಸುವ ಅರಶಿನದಲ್ಲಿ ಹಲವಾರು ಆರೋಗ್ಯ ಪ್ರಯೋಜನಗಳಿವೆ. ಅರಶಿನದಲ್ಲಿ ಅಲೋವೆರಾ, ಹಾಲು ಮತ್ತು ಕಡಲೆಹಿಟ್ಟಿನ್ನು ಮಿಶ್ರಣ ಮಾಡಿ ಅದನ್ನು ಮುಖಕ್ಕೆ ಹಚ್ಚಿಕೊಂಡು ಕೆಲವು ನಿಮಿಷಗಳ ನಂತರ ತೊಳೆಯುವುದರಿಂದ ಟ್ಯಾನ್ ಆದ ಸ್ವಚೆಯ ಬಣ್ಣ ಸುಧಾರಿಸುತ್ತದೆ.
ಸೌತೆಕಾಯಿ ಮತ್ತು ನಿಂಬೆ ಹಣ್ಣು ದೇಹಕ್ಕೆ ತಂಪು ನೀಡುತ್ತದೆ. ಸೌತೆಕಾಯಿಯನ್ನು ರುಬ್ಬಿ ಅದಕ್ಕೆ ನಿಂಬೆ ರಸ ಹಾಕಿ ಮಿಕ್ಸ್ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟು ಗಟ್ಟಿಯಾದ ನಂತರ ಅದನ್ನು ಮುಖಕ್ಕೆ ಉಚ್ಚುವುದರಿಂದ ಚರ್ಮದ ತಾಜಾತನ ಉಳಿಯುತ್ತದೆ. ಮತ್ತು ಚರ್ಮದ ತೇವಾಂಶವನ್ನು ಕಾಪಾಡಿಕೊಳ್ಳಬಹುದು.