ಬಾಯಿ ದುರ್ವಾಸನೆಯು ಅನೇಕ ಜನರ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸಮಸ್ಯೆ ಇದ್ದರೆ ಜನರಲ್ಲಿ ಕೂರಲು ಆಗಲ್ಲ, ಮಾತನಾಡಲೂ ಆಗಲ್ಲ. ಇದರಿಂದ ಅನೇಕರು ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಾರೆ.
ಕೆಟ್ಟ ಉಸಿರಾಟದ ಸಮಸ್ಯೆಯನ್ನು ಹಾಲಿಟೋಸಿಸ್ ಎಂದು ಕರೆಯಲಾಗುತ್ತದೆ. ಆದರೂ, ಬಾಯಿ ದುರ್ವಾಸನೆ ಸಮಸ್ಯೆಗೆ ಪರಿಹಾರವಿದೆ.
ನಿತ್ಯ ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಿರಿ. ಪ್ರತಿನಿತ್ಯ ಬೆಳಗ್ಗೆ ಎದ್ದಕೂಡಲೇ ಹಲ್ಲುಜ್ಜುವುದು ಸಾಮಾನ್ಯ. ಅಂತಯೇ ಮಧ್ಯಾಹ್ನ ಊಟಕ್ಕೆ ಮೊದಲು ಅಥವಾ ರಾತ್ರಿ ಊಟದ ನಂತರ ಹಲ್ಲುಜುವುದು ಒಳ್ಳೆಯ ಅಭ್ಯಾಸ. ಜೊತೆಗೆ, ಹೆಚ್ಚು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು.
ಲವಂಗವನ್ನು ನಿಧಾನವಾಗಿ ಜಗಿಯಿರಿ
ಲವಂಗ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಗಾಗ್ಗೆ 3 ರಿಂದ 4 ಲವಂಗವನ್ನು ನಿಧಾನವಾಗಿ ಜಗಿಯಿರಿ. ನಿಮ್ಮ ಬಾಯಿಯ ದುರ್ವಾಸನೆ, ಹಲ್ಲು ನೋವು ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.
ಸಿಗರೇಟ್, ತಂಬಾಕು ಸೇವನೆ ಬಿಡಿ
ಸಿಗರೇಟ್, ತಂಬಾಕು ಸೇವನೆಯ ಅಭ್ಯಾಸ ಇದ್ದರೆ ಬಿಟ್ಟುಬಿಡಿ. ಇದರಿಂದ ಬಾಯಿ ದುರ್ವಾಸನೆ ಸಮಸ್ಯೆ ಉಂಟಾಗುತ್ತದೆ. ಒಮ್ಮೆಲೆ ಈ ಅಭ್ಯಾಸ ಬಿಡಲು ಆಗುವುದಿಲ್ಲ. ಕ್ರಮೇಣವಾಗಿ ಸಿಗರೇಟ್, ತಂಬಾಕು ಸೇವನೆಯಿಂದ ದೂರ ಉಳಿಯಿರಿ. ದುರ್ವಾಸನೆ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.