ಟೆಸ್ಟ್ ಕ್ರಿಕೆಟ್ನಲ್ಲಿ ತಂಡವನ್ನು ಮುನ್ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ. ಪಂದ್ಯದ 5 ದಿನಗಳ ಆಟದಲ್ಲಿ ತನ್ನೊಂದಿಗೆ ಇತರ ಆಟಗಾರರ ಸಾಮರ್ಥ್ಯವನ್ನು ಸರಿದೂಗಿಸಿಕೊಂಡು ಹೋಗುವ ಜವಾಬ್ದಾರಿ ತಂಡದ ನಾಯಕರ ಮೇಲೆ ಇರುತ್ತದೆ.
ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಆದರೆ, ಮೊದಲನೇ ಪಂದ್ಯದಲ್ಲಿ ಹೀನಾಯ ಸೋಲು ಅನುಭವಿಸಿದೆ. ಅಂದ ಹಾಗೆ ಪ್ರಸಕ್ತ ವರ್ಷದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಸೋತ ನಾಯಕರ ವಿವರ ಇಲ್ಲಿದೆ.
1. ಆಂಡ್ರ್ಯೂ ಬಾಲ್ಬಿರ್ನಿ (ಐರ್ಲೆಂಡ್)
ಕ್ರಿಕೆಟ್ ಶಿಶು ಐರ್ಲೆಂಡ್ ತಂಡದ ನಾಯಕ ಆಂಡ್ರ್ಯೂ ಬಾಲ್ಬಿರ್ನಿ 2023ರಲ್ಲಿ 4 ಪಂದ್ಯಗಳಲ್ಲಿ ತಂಡದ ಸಾರಥ್ಯ ವಹಿಸಿದರೂ ಒಂದೇ ಒಂದು ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸುವಲ್ಲಿ ಎಡವಿದ್ದಾರೆ. ಬಾಂಗ್ಲಾದೇಶ ವಿರುದ್ಧ (1-0), ಇಂಗ್ಲೆಂಡ್ (1-0), ಶ್ರೀಲಂಕಾ (2-0) ವಿರುದ್ಧ ಸರಣಿಗಳಲ್ಲಿ ಸೋಲು ಕಂಡಿದ್ದಾರೆ.
2. ದಿಮುತ್ ಕರುಣಾರತ್ನೆ (ಶ್ರೀಲಂಕಾ)
ದ್ವೀಪ ರಾಷ್ಟ್ರ ಶ್ರೀಲಂಕಾ ತಂಡವನ್ನು ಟೆಸ್ಟ್ ಸ್ವರೂಪದಲ್ಲಿ ಮುನ್ನಡೆಸುತ್ತಿರುವ ದಿಮುತ್ ಕರುಣಾರತ್ನೆ 6 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದು, 4ರಲ್ಲಿ ಸೋಲು ಕಂಡಿದ್ದಾರೆ. ನ್ಯೂಜಿಲೆಂಡ್ (2-0) ಹಾಗೂ ಪಾಕಿಸ್ತಾನ (2-0) ವಿರುದ್ಧ ಟೆಸ್ಟ್ ಸರಣಿಯಲ್ಲಿ ಮುಖಭಂಗ ಅನುಭವಿಸಿದ್ದಾರೆ.
3. ಪ್ಯಾಟ್ ಕಮಿನ್ಸ್
2023ರಲ್ಲಿ ಐಸಿಸಿ ಆಯೋಜನೆಯ ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಪ್ಯಾಟ್ ಕಮಿನ್ಸ್ ಯಶಸ್ವಿ ನಾಯಕರಾಗಿದ್ದಾರೆ. ಆದರೆ ಈ ವರ್ಷ ಕಮಿನ್ಸ್ 10 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಒಂದು ಹಾಗೂ ಆಷಸ್ ಟೆಸ್ಟ್ ಸರಣಿಯಲ್ಲಿ 2 ಪಂದ್ಯಗಳಲ್ಲಿ ಸೇರಿದಂತೆ ಒಟ್ಟು 4 ಪಂದ್ಯಗಳಲ್ಲಿ ಕಮಿನ್ಸ್ ಸೋಲಿನ ರುಚಿ ಕಂಡಿದ್ದಾರೆ.
4. ಕ್ರೇಗ್ ಬ್ರಾಥ್ವೇಟ್ (ವೆಸ್ಟ್ ಇಂಡೀಸ್)
ಕೆರಿಬಿಯನ್ ನಾಡಿನ ಟೆಸ್ಟ್ ನಾಯಕರಾಗಿರುವ ಕ್ರೆಗ್ ಬ್ರಾಥ್ವೇಟ್ 2023ರಲ್ಲಿ 6 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ ಮೂರರಲ್ಲಿ ಸೋಲು ಕಂಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ (2-0), ಭಾರತ ವಿರುದ್ಧ (1-0) ಸರಣಿ ಸೋಲು ಕಂಡಿದ್ದಾರೆ.
5. ಬೆನ್ ಸ್ಟೋಕ್ಸ್ ( ಇಂಗ್ಲೆಂಡ್)
ಇಂಗ್ಲೆಂಡ್ ತಂಡದ ನಾಯಕತ್ವ ವಹಿಸಿರುವ ಬೆನ್ ಸ್ಟೋಕ್ಸ್ , ಈ ವರ್ಷ 7 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 3 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಒಂದು ಹಾಗೂ ಆಷಸ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ 2 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.
6. ರೋಹಿತ್ ಶರ್ಮಾ
2023ರ ಐಸಿಸಿ ಆಯೋಜನೆಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ರನ್ನರ್ ಅಪ್ ಹಾಗೂ ಬಾರ್ಡರ್- ಗವಾಸ್ಕರ್ ಸರಣಿ ಗೆದ್ದಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ, ಈ ವರ್ಷ 8 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 3 ಪಂದ್ಯಗಳಲ್ಲಿ ಸೋಲು ಕಂಡಿದ್ದಾರೆ.