ಮನು ಭಾಕರ್ ಅವರ ಜೊತೆ 2024ರ ಪ್ಯಾರಿಸ್ ಒಲಿಂಪಿಕ್ಸ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಭಾರತದ ಸರಬ್ಜೋತ್ ಸಿಂಗ್ ಕಂಚಿನ ಪದಕ ಮುಡಿಗೇರಿಸಿಕೊಳ್ಳುವ ಮೂಲಕ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಸರಬ್ಜೋತ್ ಅವರು 10 ಮೀಟರ್ ಪುರುಷರ ಏರ್ ಪಿಸ್ತೂಲ್ ವಿಭಾಗದಲ್ಲಿ ಕೂದಲೆಳೆಯ ಅಂತರದಲ್ಲಿ ಕಂಚಿನ ಪದಕ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿದ್ದರು. ಆದರೆ, ಶೂಟಿಂಗ್ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಮನು ಭಾಕರ್ ಅವರ ಜೊತೆಗೂಡಿ ಸರಬ್ಜಿತ್ ತಮ್ ಕನಸನ್ನು ನನಸು ಮಾಡಿಕೊಂಡಿದ್ದಾರೆ.
7 ತಿಂಗಳ ಗರ್ಭಿಣಿಯಾಗಿದ್ದರೂ ಒಲಿಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿದ ಈಜಿಪ್ಟ್ ಫೆನ್ಸರ್ ನಾಡಾ ಹಫೀಜ್
ಸರಬ್ಜೋತ್ ಸಿಂಗ್ ಅವರು ಹರಿಯಾಣ ಅಂಬಾಲದ ಧೀನ್ ಗ್ರಾಮದವರಾಗಿದ್ದು,ಕೃಷಿಕ ಜಿತೀಂದರ್ ಸಿಂಗ್ ಮತ್ತು ಹರ್ದೀಪ್ ಕೌರ್ ದಂಪತಿಯ ಪುತ್ರರಾಗಿದ್ದಾರೆ. ಚಂಡೀಗಢದ ಡಿಎವಿ ಕಾಲೇಜಿನ ವಿದ್ಯಾಭ್ಯಾಸವನ್ನು ಮುಗಿಸಿದ್ದಾರೆ ಹಾಗೂ ಅಭಿಷೇಕ್ ರಾಣಾ ಅವರ ಅಡಿಯಲ್ಲಿ ಶೂಟಿಂಗ್ ಅಭ್ಯಾಸವನ್ನು ನಡೆಸುತ್ತಿದ್ದಾರೆ. ತಮ್ಮ ಬಾಲ್ಯದ ದಿನಗಳಲ್ಲಿ ಬೇಸಿಗೆ ಶಿಬಿರದ ಸಮಯದಲ್ಲಿ ತಾತ್ಕಾಲಿಕ ಶ್ರೇಣಿಯಲ್ಲಿ ಕೆಲವು ಮಕ್ಕಳು ಏರ್ ಗನ್ಗಳನ್ನು ಚಲಾಯಿಸುವುದನ್ನು ನೋಡಿದ್ದ ಸರಬ್ಜೋತ್, ಶೂಟಿಂಗ್ಗೆ ಆಕರ್ಷಿತರಾಗಿದ್ದರು.
ತಮ್ಮ 13ನೇ ವಯಸ್ಸಿನಲ್ಲಿ ಫುಟ್ಬಾಲ್ ಆಟಗಾರನಾಗಬೇಕೆಂಬ ಕಸನು ಕಂಡಿದ್ದರು. ಆದರೆ, ಪಿಸ್ತೂಲ್ ಕೈಯಲ್ಲಿ ಹಿಡಿದುಕೊಂಡು ಕಾಗದದ ಮೇಲೆ ಗುರಿಯಿಡಲು ಸಾಗುತ್ತಿದ್ದ ಮಕ್ಕಳ ದೃಶ್ಯಗಳು ಸರಬ್ಜೋತ್ ಸಿಂಗ್ ಅವರ ಮನಸಿನ ಮೇಲೆ ಗಾಢವಾದ ಪ್ರಭಾವವನ್ನು ಬೀರಿತ್ತು. ಈ ವೇಳೆ ಶೂಟಿಂಗ್ ಕಲಿಯುತ್ತೇನೆಂದು ತಮ್ಮ ಅಪ್ಪನಿಗೆ ಸರಬ್ಜೋತ್ ಕೇಳಿಕೊಂಡಿದ್ದರು. ಆದರೆ, ಅವರ ತಂದೆ ಶೂಟಿಂಗ್ ಅತ್ಯಂತ ದುಬಾರಿ ಕ್ರೀಡೆಯಾಗಿದೆ ಎಂದು ಹೇಳಿದ್ದರು. ಆದರೆ, ಛಲ ಬಿಡದ ಸರಬ್ಜೋತ್ ಸಿಂಗ್ ಕೆಲವೇ ತಿಂಗಳುಗಳಲ್ಲಿ ಶೂಟಿಂಗ್ ಆರಂಭಿಸಿದ್ದರು. ಅದರಂತೆ 2019ರಲ್ಲಿ ಕಿರಿಯರ ವಿಶ್ವ ಚಾಂಪಿಯನ್ಷಿಪ್ನಲ್ಲಿ ಅವರು ಚಿನ್ನದ ಪದಕವನ್ನು ಗೆದ್ದಿದ್ದರು.