ಬೆಂಗಳೂರು:- ಕರ್ನಾಟಕದ ರಾಜಧಾನಿ, ಸಿಲಿಕಾನ್ ಸಿಟಿ , ಗಾರ್ಡನ್ ಸಿಟಿ ಎಂದೆಲ್ಲಾ ಕರೆಯಿಸಿಕೊಳ್ಳುವ ಬೆಂಗಳೂರಿನ ಇತಿಹಾಸ, ಈ ಊರಿನ ವಿಶೇಷತೆ ಬಗ್ಗೆ ಎಷ್ಟೋ ಜನರಿಗೆ ಗೊತ್ತೆ ಇಲ್ಲಾ. ಹೀಗಾಗಿ ಬೆಂಗಳೂರಿಗೆ ಈ ಹೆಸರು ಯಾಕೆ ಬಂತು, ಈ ಹೆಸರಿನ ಹಿಂದಿನ ಇತಿಹಾಸವೇನು..? ಬೆಂಗಳೂರಿನ ವಿಶೇಷತೆ ಏನು ಎನ್ನುವುದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
ಬೆಂದ ಕಾಳು ಊರು, ಬೆಂದಕಾಡೂರು, ಬೆಂಗಾಡೂರು, ಬೆಂಗಾಳೂರು, ಬೆಂಗಳೂರು ಹೀಗೆ ವಿವಿಧ ಹಂತದಲ್ಲಿ ಈ ಊರಿನ ಹೆಸರು ಬದಲಾಗಿದೆ ಎಂದು ಇತಿಹಾಸ ತಜ್ಣರು ಹೇಳುತ್ತಾರೆ. 12ನೇ ಶತಮಾನದಲ್ಲಿ ರಾಜ ವೀರ ಬಲ್ಲಾಳ ಎಂಬ ರಾಜ ಈ ಪ್ರದೇಶಕ್ಕೆ ಬೇಟೆಯಾಡಲು ಬರುತ್ತಾನೆ. ಈ ದಟ್ಟ ಅರಣ್ಯದಲ್ಲಿ ಕಳೆದು ಹೋದ ಆತ ಹಸಿವು ಬಾಯಾರಿಕೆಯಿಂದ ಬಳಲುತ್ತಿದ್ದಾಗ ಆತನ ಕಣ್ಣಿಗೆ ಒಬ್ಬ ವೃದ್ಧೆಯ ಗುಡಿಸಲು ಕಾಣಿಸುತ್ತದೆ. ಅಲ್ಲಿ ವೃದ್ಧೆ ಆತನಿಗೆ ತನ್ನ ಬಳಿಯಿದ್ದ ಬೇಯಿಸಿದ ಕಾಳುಗಳನ್ನು ಆತನಿಗೆ ನೀಡುತ್ತಾನೆ. ಆದ್ದರಿಂದ ಈ ಸ್ಥಳಕ್ಕೆ ಬೆಂದ ಕಾಳು ಊರು ಎಂದು ಹೆಸರನ್ನು ನೀಡಲಾಯಿತು ಎನ್ನುವ ಇತಿಹಾಸವಿದೆ.
ಕ್ರಿಸ್ತ ಶಕ 1537ರ ತನಕ ಬೆಂಗಳೂರು, ದಕ್ಷಿಣ ಭಾರತದ ಸಂಸ್ಥಾನಗಳಾದ ಗಂಗ, ಚೋಳ ಮತ್ತು ಹೊಯ್ಸಳರ ಆಳ್ವಿಕೆಗೆ ಒಳಪಟ್ಟಿತ್ತು. ಮರಾಠರು ಮತ್ತು ಮುಘಲರು ಅಲ್ಪಾವಧಿಯಲ್ಲಿ ಇಲ್ಲಿ ಆಡಳಿತ ನಡೆಸಿದ್ದು, ಈ ಪ್ರದೇಶ ಕೊನೆಯಲ್ಲಿ ಮೈಸೂರು ರಾಜರ ಆಧಿಪತ್ಯದಲ್ಲೇ ಉಳಿದಿತ್ತು. ಬಳಿಕ ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದ ಬಳಿಕ ಬ್ರಿಟೀಷರು ಮೈಸೂರು ಸಂಸ್ಥಾನವನ್ನು ತಮ್ಮ ಆಡಳಿತದ ಒಂದು ರಾಜ್ಯವನ್ನಾಗಿಸಿ, ಬೆಂಗಳೂರನ್ನು ಅದರ ರಾಜಧಾನಿಯಾಗಿ ಘೋಷಿಸಿ, ಮೈಸೂರು ಒಡೆಯರ ಆಡಳಿತಕ್ಕೊಪ್ಪಿಸಿದರು ಎಂದು ಉಲ್ಲೇಖವಾಗಿದೆ.
ಇನ್ನು ಬೆಂದ ಕಾಳು ಊರು ಎಂದಿದ್ದ ಹೆಸರನ್ನು ಬ್ರಿಟೀಷರು ಉಚ್ಛರಿಸಲಾಗದೇ ಬೆಂಗಾಳೂರು ಎಂದು ಕರೆಯುತ್ತಿದ್ದರು ಎನ್ನಲಾಗಿದೆ. 1537ರಲ್ಲಿ ಯಲಹಂಕ ನಾಡಪ್ರಭು ಕೆಂಪೇಗೌಡರು ಬೆಂಗಳೂರಿನಲ್ಲಿ ಮಣ್ಣಿನ ಕೋಟೆ ಕಟ್ಟಿ ಆಧುನಿಕ ಬೆಂಗಳೂರಿನ ಉದಯಕ್ಕೆ ಕಾರಣಕರ್ತರಾದರು. ಹೀಗಾಗಿ ಬೆಂಗಳೂರಿಗೆ ಕೆಂಪೇಗೌಡರು ಕಟ್ಟಿದ ಊರು ಎಂದು ಕರೆಯಲಾಗುತ್ತದೆ. ಜೊತೆಗೆ ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ನಾಡಪ್ರಭು ಕೆಂಪೇಗೌಡರ ಹೆಸರನ್ನೇ ಇಡಲಾಗಿದೆ.
ಸದ್ಯ ಬೃಹತ್ ನಗರವಾಗಿ ನಿರ್ಮಾಣಗೊಂಡಿರುವ ಬೆಂಗಳೂರು ಬಹುಭಾಷಿಗರು ಬಹುಧರ್ಮಿಯರು, ಬಹುಜಾತಿಗರು ವಾಸಿಸುತ್ತಿದ್ದಾರೆ. ಉದ್ಯೋಗ ಅರಸಿ ಬರುವವರಿಗೆ, ಉದ್ಯಮ ಆರಂಭಿಸುವವರಿಗೆ ಇದು ಸೂಕ್ತವಾದ ಸ್ಥಳವಾಗಿದೆ. ಇನ್ನು ಬೆಂಗಳೂರಿನಲ್ಲಿ ಎಲ್ಲಾ ಭಾಗದ ಜನರು ವಾಸಿಸುವುದರಿಂದ ಇಲ್ಲಿ ಬಹು ಸಂಸ್ಕೃತಿ, ವಿವಿಧ ರೀತಿಯ ಆಹಾರ ಪದ್ಧತಿ, ಬಹು ಜೀವನ ಶೈಲಿ ಇದ್ದು, ವಿವಿಧತೆಯಲ್ಲಿ ಏಕತೆಗೆ ಬೆಂಗಳೂರು ಸಾಕ್ಷಿಯಾಗಿದೆ.
ವಿಸ್ತೀರ್ಣದಲ್ಲಿ ಅತಿದೊಡ್ಡ ಊರಾಗಿರುವ ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು ಪ್ರವಾಸಿ ತಾಣಗಳಿವೆ. ಪುರಾತನ ದೇವಾಲಯಗಳು, ಮಾರುಕಟ್ಟೆಗಳು, ಉದ್ಯಾನವನಗಳು, ಪ್ರಸಿದ್ಧ ಕಟ್ಟಡಗಳು ಹೀಗೆ ನಗರದ ಮೂಲೆ ಮೂಲೆಯಲ್ಲೂ ನೋಡಬಹುದಾದ ಸ್ಥಳಗಳಿವೆ. ಜಲ ಮಾರ್ಗ ಒಂದು ಹೊರತು ಪಡಿಸಿ, ವಾಯು, ರಸ್ತೆ, ರೈಲ್ವೆ ಎಲ್ಲಾ ಮಾರ್ಗವಾಗಿಯೂ ಬೆಂಗಳೂರು ತಲುಪಬಹುದಾಗಿದೆ.
ಲಾಲ್ಬಾಗ್, ಕಬ್ಬನ್ ಪಾರ್ಕ್, ವಿಧಾನ ಸೌಧ, ಬೆಂಗಳೂರು ಅರಮನೆ, ಹೈಕೋರ್ಟ್, ಬೆಂಗಳೂರು ಕೋಟೆ, ಚಿಕ್ಕಪೇಟೆ, ದೊಡ್ಡಪೇಟೆ, ಟಿಪ್ಪು ಸುಲ್ತಾನ ಕೋಟೆ ಮತ್ತು ಅರಮನೆ, ಕೆಆರ್ ಮಾರುಕಟ್ಟೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಹಲಸೂರು ಕೆರೆ, ನೆಹರು ತಾರಾಲಯ, ಎಚ್ಎಎಲ್ ಏರೋಸ್ಪೇಸ್ ಮ್ಯೂಸಿಯಂ, ಯುಬಿ ಸಿಟಿ, ವಂಡರ್ಲಾ ಸೇರಿದಂತೆ ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾದ ವಿವಿಧ ಸ್ಥಳಗಳಿದೆ.
ಇನ್ನು ದೇವಾಲಯಗಳಿಗೂ ಬೆಂಗಳೂರು ಹೆಸರುವಾಸಿಯಾಗಿದ್ದು, ಚೊಕ್ಕನಾಥ ಸ್ವಾಮಿ ದೇವಸ್ಥಾನ, ದೊಡ್ಡ ಬಸವನ ಗುಡಿ, ದೊಡ್ಡ ಗಣೇಶ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನ, ಇಸ್ಕಾನ್, ಕಾರ್ಯ ಸಿದ್ಧಿ ಆಂಜನೇಯ, ಪಂಚಮುಖಿ ಆಂಜನೇಯ, ಸಾಯಿ ಮಂದಿರಗಳು, ಬನಶಂಕರಿ ದೇವಸ್ಥಾನ, ಕಾಡು ಮಲ್ಲೇಶ್ವರ ದೇವಸ್ಥಾನ, ಶಿವನ ದೇವಾಲಯಗಳು ಹೀಗೆ ಅನೇಕ ದೇವಾಲಯಗಳು ಬೆಂಗಳೂರಿನಲ್ಲಿದೆ. ಅಲ್ಲದೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತಿಹಾಸ ಪ್ರಸಿದ್ಧ ಮಸೀದಿ ಹಾಗೂ ಚರ್ಚ್ಗಳು ಕೂಡ ಕಾಣಬಹುದಾಗಿದೆ. ಬೆಂಗಳೂರಿನಲ್ಲಿ ಸಾರಿಗೆ ಸಂಪರ್ಕಕ್ಕೆ ಬಿಎಂಟಿಸಿ, ಕೆಆರ್ಟಿಸಿ ಬಸ್ಗಳ ಸೌಲಭ್ಯ ಮಾತ್ರವಲ್ಲದೇ ನಮ್ಮ ಮೆಟ್ರೋ ಕೂಡ ಇದ್ದು, ಬೆಂಗಳೂರಿನಲ್ಲಿ ಪ್ರಯಾಣ ಮತ್ತಷ್ಟು ಸುಲಭವಾಗಿದೆ.