ಬೆಂಗಳೂರು: ತೋಟಗಾರಿಕೆಯಲ್ಲಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಮೊದಲ ಆದ್ಯತೆಯಾಗಿದೆ. ತೋಟಗಾರಿಕೆ ಬೆಳೆಗೆ ಪ್ರಮುಖ ಸಂಪನ್ಮೂಲವಾದದ್ದು ಜೀವಜಲ ನೀರು. ನೀರು ಮಿತವಾಗಿ ಬಳಸಿ, ರೈತರು ಉತ್ತಮ ಫಸಲು ಪಡೆಯುವ ಹಿನ್ನೆಲೆಯಲ್ಲಿ ಹನಿ ನಿರಾವರಿ, ತುಂತುರು ನೀರಾವರಿ ಯೋಜನೆಯನ್ನು ತೋಟಗಾರಿಕೆ ಇಲಾಖೆ ಅನುಷ್ಠಾನ ಮಾಡುತ್ತಿದೆ. ಸೂಕ್ಷ್ಮ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ಸೂಕ್ಷ್ಮ ನೀರಾವರಿ ಮಿಷನ್ ಆಗಿ ಮರು ನಾಮಕರಣ ಮಾಡಲಾಗಿತ್ತು. ನಂತರ 2014-15ನೇ ಸಾಲಿನಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನದಡಿ ಅನುಷ್ಠಾನಗೊಳಿಸಲಾಗಿತ್ತು.
ಮಾನದಂಡವೇನು? : ಈ ಯೋಜನೆಯಡಿಯಲ್ಲಿ ಸಹಾಯಧನವನ್ನು ಪಡೆಯಲು ರೈತರು ಕೆಲವೊಂದು ಮಾನದಂಡಗಳನ್ನು ಹೊಂದಿರಬೇಕು. ತಮ್ಮದೇ ಹೆಸರಿನಲ್ಲಿ ರೈತರು ಜಮೀನನ್ನು ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿಯ ರೈತರು ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಹೊಂದಿರಬೇಕು.
ರೈತರು ಅರ್ಜಿಯನ್ನು ಸಲ್ಲಿಸಿ ಅದು ಅನುಮೋದನೆಯಾದ ನಂತರ ರೈತರು ತೋಟಗಾರಿಕೆ ಇಲಾಖೆ ವತಿಯಿಂದ ಅನುಮೋದನೆಗೊಂಡ ಕಂಪನಿ/ಡೀಲರ್ ಅವರಿಂದ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಬಹುದು.
ಯೋಜನೆಯ ಲಾಭ ಯಾರಿಗೆ? : ಈ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಬೇರೆ ಬೇರೆ ಸೌಲಭ್ಯಗಳಿವೆ. ಹನಿ ನೀರಾವರಿ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಹನಿ ನೀರಾವರಿ ಘಟಕ ನಿರ್ಮಾಣ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸುವ ರೈತರಿಗೆ ಆಯಾ ಬೆಳೆಗಳು ಮತ್ತು ಬೆಳೆಗಳ ಅಂತರಕ್ಕನುಗುಣವಾಗಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ರೈತರಿಗೆ ಪ್ರಥಮ 2 ಹೆಕ್ಟೇರ್ಗೆ ಮಾರ್ಗಸೂಚಿಯನ್ವಯ ನಿಗದಿಪಡಿಸಿರುವ ವೆಚ್ಚದ ಶೇ.90 ರಷ್ಟು ಸಹಾಯಧನವನ್ನು ಹಾಗೂ ಇತರೆ ವರ್ಗದ ರೈತರಿಗೆ ಶೇ.75ರಷ್ಟು ಸಹಾಯಧನವನ್ನು ನೀಡಲಾಗುವುದು.
2 ಹೆಕ್ಟೇರ್ಗೆ ಮೇಲ್ಪಟ್ಟು 5 ಹೆಕ್ಟೇರ್ ವರೆಗೆ ಶೇ. 45ರಷ್ಟು ಸಹಾಯಧನವನ್ನು ನೀಡಲಾಗುವುದು (ತರಕಾರಿ ಹಾಗೂ ವಾಣಿಜ್ಯ ಹೂ ಬೆಳೆಗಳಿಗೆ ಗರಿಷ್ಠ 2 ಹೆಕ್ಟೇರ್ ವರೆಗೆ ಸಹಾಯಧನವನ್ನು ನೀಡಲಾಗುವುದು). ಈ ಸೌಲಭ್ಯವನ್ನು ಪ್ರತಿ ಫಲಾನುಭವಿಗೆ 5 ಹೆಕ್ಟೇರ್ ಪ್ರದೇಶದವರೆಗೆ ಮಿತಿಗೊಳಿಸಲಾಗಿದೆ.
ತೋಟಗಾರಿಕೆಯಲ್ಲಿ ಕೃಷಿ ಮಾಡುತ್ತಿರುವ ಹಾಗೂ ನೀರಾವರಿ ಮೂಲ ಹೊಂದಿರುವ ರೈತರು ತಮ್ಮ ಜಮೀನಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಆಸಕ್ತಿ ಇದ್ದಲ್ಲಿ ತಮ್ಮ ಜಮೀನು ವ್ಯಾಪ್ತಿಯ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ತಾಲ್ಲೂಕು ಕಚೇರಿಯ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ ಹನಿ ನೀರಾವರಿ ಅಳವಡಿಸಲು ನಿಗದಿತ ಅರ್ಜಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ, ಸಂಬಂಧಿಸಿದ ತಾಲೂಕು ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.