ಚಾಮರಾಜನಗರ:- ತಮಿಳುನಾಡಲ್ಲಿ ಭಾರೀ ಮಳೆ ಹಿನ್ನೆಲೆ, ಚಾಮರಾಜನಗರ ಜಿಲ್ಲೆಯ ಜೀವನಾಡಿ ಸುವರ್ಣಾವತಿ ಜಲಾಶಯ ಸಂಪೂರ್ಣ ಭರ್ತಿಯಾಗಿದೆ.
ಕಳೆದ ಎರಡು ವರ್ಷಗಳಿಂದ ಸುವರ್ಣಾವತಿ ಜಲಾಶಯ ತುಂಬಿ ಹರಿಯುತ್ತಿದೆ. ಸುವರ್ಣಾವತಿ ಜಲಾಶಯ ಗರಿಷ್ಠ ಮಟ್ಟ ತಲುಪುವ ಹಂತದಲ್ಲಿರುವುದರಿಂದ, ನದಿ ಪಾತ್ರಗಳಿಗೆ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.
ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ 150 ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಜಲಾಶಯದ ನದಿಪಾತ್ರದಲ್ಲಿ ಬರುವ ರೈತರು ಹಾಗೂ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಕಾವೇರಿ ನೀರಾವರಿ ನಿಗಮದ ಕಬಿನಿ ನಾಲೆಗಳ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಸುವರ್ಣಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ಮಳೆ ಆಗುತ್ತಿರುವುದರಿಂದ ಜಲಾಶಯದ ನೀರಿನ ಸಾಮರ್ಥ್ಯ ಗರಿಷ್ಠ ಮಟ್ಟ ಮುಟ್ಟುತ್ತಿದ್ದು ಯಾವುದೇ ಕ್ಷಣದಲ್ಲೂ ಭರ್ತಿಯಾಗಬಹುದು. ಹಾಗಾಗಿ ಗುರವಾರ ಸಂಜೆ 6 ಗಂಟೆಯಿಂದ ಜಲಾಶಯದಿಂದ ನೀರು ಹೊರಬಿಡಲಾಗಿದೆ.
ಚಾಮರಾಜನಗರ ತಾಲೂಕಿನ ಹರದನಹಳ್ಳಿ ಹೋಬಳಿಯ ಅಟ್ಟಗೂಳಿಪುರದ ಹತ್ತಿರದ ಸುವರ್ಣಾವತಿ ಜಲಾಶಯ ಯೋಜನೆಯ ಅಚ್ಚುಕಟ್ಟು ಪ್ರದೇಶ ಹಾಗೂ ನದಿ ಪಾತ್ರದಲ್ಲಿ ಬರುವ ರೈತರು ಮತ್ತು ಸುತ್ತಮುತ್ತಲ ಗ್ರಾಮಸ್ಥರು ಎಚ್ಚರಿಕೆ ವಹಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಆಸ್ತಿ-ಪಾಸ್ತಿ ಜಾನುವಾರುಗಳ ಬಗ್ಗೆ ನಿಗಾ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.