ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದು ಗಂಟೆಗೂ ಹೆಚ್ಚು ಸಮಯ ಮಳೆಯಾಗಿದ್ದು, ಹಲವು ಕಡೆ ಮರಗಳು ಧರೆಗುರುಳಿವೆ. ಹಲವು ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇನ್ನೂ ಕೆಲವು ಕಡೆ ಟ್ರಾಫಿಕ್ ಜಾಮ್ ಕೂಡ ಆಗಿದೆ.
ವೈಟ್ ಫೀಲ್ಡ್, ಕೆಆರ್ ಪುರಂ, ಚಿಕ್ಕಪೇಟೆ, ಬಿಡದಿ, ಮೆಜೆಸ್ಟಿಕ್, ವಿಜಯನಗರ, ಮಲ್ಲೇಶ್ವರಂ, ಜಯನಗರ, ಪೋಟ್ರಿ ಟೌನ್ ಎಸ್ಕೆ ಗಾರ್ಡನ್ ಗಾಂಧಿ ಗ್ರಾಮ ಸೇರಿ ಹಲವೆಡೆ ಮಳೆಯಾಗಿದೆ. ಸಂಜೆ ಅಫೀಸ್ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಜನರು ಮಳೆಯಲ್ಲಿ ಸಿಲುಕಿ ಒದ್ದಾಡಿದರು. ಕೆಲವರು ಅಲ್ಲಲ್ಲಿ ಶಾಪ್ಗಳ ಮುಂದೆ ನಿಂತು ಮಳೆಯಿಂದ ರಕ್ಷಣೆ ಪಡೆದರು.
ವಸಂತನಗರದಲ್ಲಿ ಮಳೆಗೆ ಆಟೋ ಮೇಲೆ ಮರದ ಜೊತೆಗೆ ವಿದ್ಯುತ್ ಕಂಬ ಬಿದ್ದು, ಆಟೋ ಮುಂಭಾಗದ ಫುಲ್ ಜಖಂ ಆಗಿದೆ. ಅದೃಷ್ಟವಶಾತ್ ಡ್ರೈವರ್ ಪಾರಾಗಿದ್ದಾರೆ. ಚಿಕ್ಕ ಪುಟ್ಟ ಗಾಯಗಳಾಗಿವೆ. ಗಾಳಿ ಸಹಿತ ಸುರಿದ ಜೋರು ಮಳೆಗೆ ವಿದ್ಯುತ್ ಕಂಬ ಜೊತೆಗೆ ಮರ ಬಿದ್ದಿದೆ.
ಬೆಂಗಳೂರು ಮಾತ್ರವಲ್ಲದೆ, ಮಲೆನಾಡು ಪ್ರದೇಶಗಳಾದ ಮಡಿಕೇರಿ, ಚಿಕ್ಕಮಗಳೂರು ಮತ್ತು ಹಾಸನ, ಶಿವಮೊಗ್ಗ ಮತ್ತಿತರ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲೂ ಸಾದಾರಣ ಮಳೆಯಾಗುತ್ತಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ ಕರ್ನಾಟದಲ್ಲಿ ಮುಂದಿನ 4 ದಿನಗಳು ಇದೇ ರೀತಿ ಭರ್ಜರಿ ಮಳೆಯು ಬೀಳುವ ಮುನ್ಸೂಚನೆ ನೀಡಿದೆ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿಯಲಿದೆ ಎಂದು ಹೇಳಲಾಗಿದೆ. ಮಂಗಳವಾರ ಕೂಡ ತುಮಕೂರು, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆಯಾಗಿತ್ತು. ಬುಧವಾರ ಕೂಡ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಆಲಿಕಲ್ಲು ಮಳೆಯಾಗಿದೆ.