ಬೆಂಗಳೂರು:- ಕರಾವಳಿ, ದಕ್ಷಿಣ ಒಳನಾಡಿಗೆ ಹೆಚ್ಚಿನ ಮಳೆಯ ಅಲರ್ಟ್ ಘೋಷಿಸಲಾಗಿದೆ ಎಂದು ಬೆಂಗಳೂರಿನಲ್ಲಿ ಹವಮಾನ ಇಲಾಖೆ ತಜ್ಞ ಎ.ಪ್ರಸಾದ್ ಹೇಳಿದರು.
ಉತ್ತರ ಒಳನಾಡಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದ್ದು, ಅಕ್ಟೋಬರ್ನಿಂದ ನವೆಂಬರ್ವೆರೆಗೆ 38 ಪ್ರತಿಶತದಷ್ಟು ಮಳೆ ಕೊರತೆಯಿದೆ. ಕರಾವಳಿ ಭಾಗದಲ್ಲಿ ಶೇಕಡಾ 14 ರಷ್ಟು, ಉತ್ತರ ಒಳನಾಡಿನಲ್ಲಿ ಶೇಕಡಾ 25ರಷ್ಟು ಮಳೆ ಕೊರತೆಯಿದೆ. ಇನ್ನು ಮೈಸೂರಿನಲ್ಲಿ ಈ ವರ್ಷ ವಾಡಿಕೆಗಿಂತ ಅತಿಹೆಚ್ಚು ಮಳೆಯಾದರೆ, ಬೆಂಗಳೂರಿನಲ್ಲೂ ಈ ಬಾರಿ ಅತಿ ಹೆಚ್ಚಿನ ಮಳೆಯಾಗಿದೆ. ಈ ನಗರದಲ್ಲಿ ಮೂರು ದಿನಗಳ ಕಾಲ ಮೋಡಕವಿದ ವಾತಾವರಣ ಇರಲಿದ್ದು, ರಾತ್ರಿ ವೇಳೆ ಗುಡುಗು-ಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ತಜ್ಞ ಎ.ಪ್ರಸಾದ್ ಹೇಳಿದರು.
ರಾಜ್ಯದಲ್ಲಿ ಮಳೆಯಿಲ್ಲದೆ ಕಂಗಾಲಾಗಿದ್ದವರಿಗೆ ಹಿಂಗಾರು ಮಳೆ ಕೈಹಿಡಿದಂತೆ ಕಾಣುತ್ತಿದೆ. ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ರೈತರು, ಹಿಂಗಾರು ಹಂಗಾಮಿನ ಬೆಳೆಗಳನ್ನು ಬೆಳೆಯುತ್ತಾರೆ. ಕಡಿಮೆ ಶ್ರಮ ಹಾಗೂ ಕಡಿಮೆ ನಿರ್ವಹಣೆ ಈ ಬೆಳೆಗೆ ಸಾಕಾಗಿರುತ್ತದೆ. ಈ ಬಾರಿ ಹಿಂಗಾರು ಮಳೆ ಕೂಡ ಕೈಕೊಡುವ ಲಕ್ಷಣವಿತ್ತು. ಇದೀಗ ಕೊಡಗು, ಚಿಕ್ಕಮಗಳೂರಿನಲ್ಲಿ ಇಂದು 7 ಸೆಂ.ಮೀ. ಮಳೆ ಸಾಧ್ಯತೆಯಿದ್ದು, ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.